ಬೆಂಗಳೂರಿಗರಿಗೆ ಸದ್ಯದಲ್ಲೇ ಕಾದಿದೆ ಮತ್ತೊಂದು ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.28- ಹಲವಾರು ಬೆಲೆಗಳ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆಯಿದೆ. ಪೆಟ್ರೋಲ್, ಡೀಸೆಲ್ ಮತ್ತು ಆಟೋ ಗ್ಯಾಸ್ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆಟೋ ಪ್ರಯಾಣ ದರವನ್ನೂ 25ರಿಂದ 36 ರೂ.ಗಳಿಗೆ ಹೆಚ್ಚಿಸಬೇಕೆಂದು ಆಟೋ ಚಾಲಕರ ಸಂಘಟನೆಗಳು ಮನವಿ ಮಾಡಿದ್ದು, ಸರ್ಕಾರ ಇದಕ್ಕೆ ಅನುಮತಿ ನೀಡುವ ಸಾಧ್ಯತೆಗಳಿವೆ.

2008ರಲ್ಲಿ ಆಟೋ ದರ ಏರಿಕೆಯಾಗಿತ್ತು. ಅಂದಿನಿಂದ ಈವರೆಗೂ 13 ವರ್ಷಗಳ ಕಾಲ ದರ ಪರಿಷ್ಕರಣೆಯಾಗಿಲ್ಲ. ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಮತ್ತು ಆಟೋ ಅನಿಲ ದರ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ.

ಅದರ ಬೆನ್ನಲ್ಲೆ ದಿನನಿತ್ಯ ಅಗತ್ಯ ವಸ್ತುಗಳ ಬೆಲೆ, ಸಂಚಾರಿ ಉಲ್ಲಂಘನೆಯ ದಂಡದ ಪ್ರಮಾಣ, ಆರ್‍ಟಿಒ ಶುಲ್ಕ, ವಿಮಾ ದರಗಳು ಹೆಚ್ಚಾಗಿವೆ. 15 ವರ್ಷ ಹಳೆಯದಾದ ವಾಹನಗಳ ಎಫ್‍ಸಿ ಮಾಡಿಕೊಡಲು ಸಾರಿಗೆ ಇಲಾಖೆ ಅನುಮತಿ ನಿರಾಕರಿಸಿದೆ.

ಹೀಗಾಗಿ ಹೊಸ ಆಟೋ ಖರೀದಿಸಬೇಕಾದ ಪರಿಸ್ಥಿತಿಯಿದೆ. ಬಡಕುಟುಂಬದ ಆಟೋ ಚಾಲಕರು ಇದೇ ವೃತ್ತಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಆಟೋ ಪ್ರಯಾಣದ ಕನಿಷ್ಠ ದರವನ್ನು 36 ರೂ.ಗೆ ಹೆಚ್ಚಿಸಬೇಕೆಂದು ಆಟೋ ಚಾಲಕರ ಸಂಘ ಮನವಿ ಮಾಡಿದೆ.

ಒಂದು ವೇಳೆ ಪ್ರಯಾಣ ದರ ಹೆಚ್ಚಳ ಮಾಡದಿದ್ದರೆ ಸರ್ಕಾರವೇ ನಮಗೆ ಆರ್ಥಿಕ ನೆರವು ನೀಡಬೇಕೆಂದು ಆಟೋ ಚಾಲಕರ ಒತ್ತಾಯವಾಗಿದೆ. ಹೀಗಾಗಿ ಸರ್ಕಾರ ಪ್ರಯಾಣ ದರ ಪರಿಷ್ಕರಣೆಗೆ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin