ಆಟೋ ಮೀಟರ್ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.3- ಆಟೋ ಎಲ್‍ಪಿಜಿ ದರ ಏರಿಕೆ ಖಂಡಿಸಿರುವ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಸದಸ್ಯರು ನಗರದಲ್ಲಿ ಸಂಚರಿಸುವ ಆಟೋ ರಿಕ್ಷಾ ಮೀಟರ್ ದರವನ್ನು ಹೆಚ್ಚಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ನಗರದಲ್ಲಿ ಬಿಎಂಟಿಸಿ ನಂತರ ಸಾರಿಗೆ ವ್ಯವಸ್ಥೆಯಲ್ಲಿ ಆಟೋ ರಿಕ್ಷಾಗಳ ಸೇವೆ ನಾಗರಿಕರಿಗೆ ಪ್ರಮುಖವಾಗಿದೆ. ಆಟೋ ಎಲ್‍ಪಿಜಿ ಗ್ಯಾಸ್ ದರ ಏರಿಕೆಯಾಗಿರುವುದರಿಂದ ನಮಗೆ ತೀವ್ರ ತೊಂದರೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪ್ರತಿ ಲೀಟರ್ ಗ್ಯಾಸ್ ದರ 56 ರೂ.ಗೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 5.50 ರೂ. ಎಲ್‍ಪಿಜಿ ಗ್ಯಾಸ್ ದರ ಏರಿಕೆಯಾಗಿದೆ. ಹಾಗಾಗಿ ಆಟೋ ಮೀಟರ್ ದರವನ್ನು ಕನಿಷ್ಠ 25 ರೂ.ನಿಂದ 30 ರೂ.ಗೆ ಏರಿಕೆ ಮಾಡುವಂತೆ ವಿವಿಧ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ. ಕಳೆದ 9 ವರ್ಷಗಳ ಹಿಂದೆ ಆಟೋ ಮೀಟರ್ ದರ ಏರಿಕೆಯಾಗಿತ್ತು.

ಪ್ರತಿ ಮೂರು ವರ್ಷಕ್ಕೊಮ್ಮೆ ಮಿನಿಮಮ್ ದರ ಏರಿಕೆ ಮಾಡುವ ಅವಕಾಶವಿದ್ದರೂ ಸಾರಿಗೆ ಇಲಾಖೆ ಏರಿಕೆಗೆ ಅವಕಾಶವೇ ನೀಡಿಲ್ಲ ಎಂದು ಆಟೋ ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಆಟೋ ಮೀಟರ್ ದರವನ್ನು ಏರಿಕೆ ಮಾಡಲು ಅವಕಾಶ ಕೊಡಬೇಕೆಂದು ಜೊತೆಗೆ ಪ್ರತಿ ಕಿ.ಮೀಗೆ 16 ರೂ. ದರ ನಿಗದಿ ಮಾಡುವಂತೆ ಆದರ್ಶ ಆಟೋ ಮತ್ತು ಟಾಕ್ಸಿ ಚಾಲಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸಾರಿಗೆ ಮತ್ತು ಸುರಕ್ಷತಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳು,ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದವು.

Facebook Comments