ಅಯೋಧ್ಯೆ ತೀರ್ಪಿಗೆ ದಿನಗಣನೆ, ದೇಶಾದ್ಯಂತ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.6- ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಬಾಬರಿ ಮಸೀದಿ ಮತ್ತು ರಾಮ ಜನ್ಮಭೂಮಿ ವಿವಾದದ ಕುರಿತ ಅಂತಿಮ ತೀರ್ಪಿಗೆ ದಿನಗಣನೆ ಆರಂಭವಾಗಿದೆ. ನವೆಂಬರ್ ತಿಂಗಳಿನಲ್ಲಿ ತೀರ್ಪು ಹೊರಬೀಳಲಿದ್ದು, ಯಾವುದೇ ಅಹಿತಕರ ಘಟನೆಗಳನ್ನು ನಿಭಾಯಿಸಲು ದೇಶಾದ್ಯಂತ ತೀವ್ರ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗೃಹಸಚಿವಾಲಯ ಈಗಿನಿಂದಲೇ ಸೂಚನೆ ನೀಡಿದೆ.

ಇದೇ ವೇಳೆ ನವರಾತ್ರಿ ಹಬ್ಬ ನಡೆಯುತ್ತಿರುವ ಹಿನ್ನೆಲೆಯಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದ್ದು, ವಿಶೇಷವಾಗಿ ಅಯೋಧ್ಯೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ.  ಹೈ ಅಲರ್ಟ್ ಘೋಷಿಸಿರುವ ಹಿನ್ನೆಲೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಅಯೋಧ್ಯೆ ನಗರದಲ್ಲಿ ನಿಯೋಜಿಸಲಾಗಿದೆ.

ದುರ್ಗಾ ಪೂಜಾ ಹಾಗೂ ದಸರಾ ಮೆರವಣಿಗೆ ವೇಳೆ ಡ್ರೋಣ್ ಕಣ್ಗಾವಲು ಇಡಲಾಗಿದೆ. ಅಲ್ಲದೆ ಮೆರವಣಿಗೆಗಳಲ್ಲಿ ಬಣ್ಣಗಳನ್ನು ಬಳಸದಂತೆ ಪೂಜಾ ಸಮಿತಿಗೆ ತಿಳಿಸಿದ್ದೇವೆ. ಇದರ ಬದಲಿಗೆ ಹೂಗಳನ್ನು ಉಪಯೋಗಿಸುವಂತೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದುರ್ಗಾ ವಿಗ್ರಹ ಮೆರವಣಿಗೆ ಹಾಗೂ ದಸರಾ ಆಚರಣೆಗಳು ಸೋಮವಾರದಿಂದ ಪ್ರಾರಂಭವಾಗಲಿದ್ದು, ವಿವಿಧ ರಾಮ್ ಲೀಲಾಗಳು ದೀಪಾವಳಿ ತಿಂಗಳವರೆಗೆ ಮುಂದುವರಿಯಲಿವೆ.

ದೀಪಾವಳಿಯ ಮುನ್ನಾದಿನ ರಾಜ್ಯ ಸರ್ಕಾರ ಆಯೋಜಿಸುತ್ತಿರುವ ಮೂರು ದಿನಗಳ ದೀಪೋತ್ಸವ ಕಾರ್ಯಕ್ರಮದಲ್ಲಿ ಸಹ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಿರುವುದರಿಂದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.  ಹೆಚ್ಚು ಜನ ಆಗಮಿಸುತ್ತಿರುವ ಹಿನ್ನೆಲೆ ಎಲ್ಲ ಹೋಟೆಲ್, ಅತಿಥಿ ಗೃಹ, ಧರ್ಮಶಾಲೆ, ವಸತಿ ಗೃಹ, ಹಾಸ್ಟೆಲ್ ಹಾಗೂ ಹೋಮ್ ಸ್ಟೇಗಳನ್ನು ಪರಿಶೀಲಿಸುವಂತೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗೆ ಸೂಚಿಸಲಾಗಿದೆ.

Facebook Comments