ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಮಂದಿರ ಕೆಡವಲಾಯಿತು : ರಾಮಲಲ್ಲಾ ವಕೀಲರ ವಾದ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.20-ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಹಿಂದೂ ದೇವಾಲಯವನ್ನು ಕೆಡವಲಾಯಿತು ಎಂದು ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಪಕ್ಷಗಾರರಲ್ಲಿ ಒಬ್ಬರಾದ ರಾಮಲಲ್ಲಾ ವಿರಾಜ್‍ಮಾನ್ ಪರ ವಕೀಲರು ಸುಪ್ರೀಂಕೋರ್ಟ್‍ನಲ್ಲಿ ಇಂದು ವಾದ ಮಂಡಿಸಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ನಡೆಯುತ್ತಿದ್ದು, ರಾಮಲಲ್ಲಾ ವಿರಾಜ್‍ಮಾನ್ ಪರ ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್, ಅಯೋಧ್ಯೆಯೇ ರಾಮನ ಜನ್ಮಸ್ಥಳ ಮತ್ತು ಈ ಸ್ಥಳದಲ್ಲಿ ರಾಮ ಮಂದಿರ ಇತ್ತು ಎಂಬ ತಮ್ಮ ವಾದ ಮತ್ತು ಸಮರ್ಥನೆಯನ್ನು ಮುಂದುವರಿಸಿದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪಂಚ ನ್ಯಾಯಾಧೀಶರ ಸಾಂವಿಧಾನಿಕ ಪೀಠ ಅಯೋಧ್ಯೆ-ಬಾಬರಿ ಮಸೀದಿ ಭೂ ವಿವಾದ ಕುರಿತು ದಿನನಿತ್ಯದ ವಿಚಾರಣೆಯನ್ನು ಎಂಟನೇ ದಿನವಾದ ಇಂದೂ ಕೂಡ ನಡೆಸಿತು.

ಭಾರತೀಯ ಸವೇಕ್ಷಣಾ ಸಂಘ (ಎಎಸ್‍ಐ)ದ ವರದಿ ಪ್ರಕಾರ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಹಿಂದು ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬ ಅಂಶವನ್ನು ವೈದ್ಯನಾಥನ್ ಪ್ರತಿಪಾದಿಸಿದರು. ಕಂಬಗಳ ಮೇಲೆ ಅನೇಕ ಹಿಂದು ದೇವರ ಚಿತ್ರಗಳು ಪತ್ತೆಯಾಗಿದ್ದು, ಅಯೋಧ್ಯೆಯೇ ರಾಮನ ಜನ್ಮಸ್ಥಳ ಎಂಬುದಕ್ಕೆ ಪ್ರಮುಖ ಸಾಕ್ಷ್ಯಾಧಾರವಾಗಿದೆ ಎಂದು ಅವರು ಮೊನ್ನೆಯಷ್ಟೇ ವಾದ ಮಂಡಿಸಿದ್ದರು.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆ ರಾಮಲಲ್ಲಾ ವಿರಾಜ್‍ಮಾನ್ ಪರ ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್, ವಿವಾದಿತ ಸ್ಥಳದಲ್ಲಿನ ಕಂಬಗಳ ಮೇಲೆ ಅನೇಕ ಹಿಂದು ದೇವರು ಮತ್ತು ದೇವತೆಗಳ ಚಿತ್ರಗಳು ಪತ್ತೆಯಾಗಿವೆ ಎಂಬ ಸಂಗತಿಯನ್ನು ಅಲ್ಲಿ ಪರಿಶೀಲನೆ ನಡೆಸಲು ನೇಮಕಗೊಂಡಿದ್ದ ಆಯೋಗದ ವರದಿಯನ್ನು ಉಲ್ಲೇಖಿಸಿದ್ದರು.

ಈ ಸ್ಥಳದಲ್ಲಿ ರಾಮ ಮಂದಿರ ಇತ್ತು. ರಾಮಮಂದಿರದ ಇದ್ದ ಸ್ಥಳದಲ್ಲೇ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಬಗ್ಗೆ ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್.ಎ.ನಜೀರ್ ಅವರನ್ನೂ ಒಳಗೊಂಡ ಪಂಚ ನ್ಯಾಯಪೀಠ ಆಗಸ್ಟ್ 6ರಿಂದ ವಿಚಾರಣೆ ನಡೆಸುತ್ತಿದೆ.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಖಲಿಫೂಲ್ಲಾ ನೇತೃತ್ವದ ತ್ರಿಸದಸ್ಯರ ಮಧ್ಯಸ್ಥಿಕೆ ಸಮಿತಿಯ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ವಿವಾದದ ದಿನನಿತ್ಯದ ವಿಚಾರಣೆ ಕೈಗೆತ್ತಿಕೊಂಡಿದೆ.

ರಾಮಜನ್ಮಭೂಮಿ, ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಒಟ್ಟು 14 ಅರ್ಜಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಈ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ.

ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ 2.77 ಎಕರೆ ಭೂ ಪ್ರದೇಶವನ್ನು ಸುನ್ನಿ ವಕ್ಫ್ ಮಂಡಳಿ ನಿರ್ಮೋಹಿ ಅಖಾಡ ಹಾಗೂ ರಾಮಲಲ್ಲಾ ಈ ಮೂವರು ಪಕ್ಷದಾರರಿಗೆ ಸಮನಾಗಿ ಹಂಚಿಕೆ ಮಾಡಿತ್ತು. ಆದರೆ ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.

ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚಿಸಲಾಗಿದ್ದ ತ್ರಿಸದಸ್ಯ ಮಧ್ಯಸ್ಥಿಕೆ ಸಮಿತಿ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಸಂಧಾನ ಪ್ರಕ್ರಿಯೆ ಕೈಗೊಂಡು ಸರ್ವೋಚ್ಚ ನ್ಯಾಯಾಲಯಕ್ಕೆ ತನ್ನ ಮಧ್ಯಂತರ ವರದಿ ಸಲ್ಲಿಸಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ