ಬ್ರೇಕಿಂಗ್ : ಅಯೋಧ್ಯೆ ವಿವಾದದ ವಿಚಾರಣೆ ಅಂತ್ಯ, ನ.17ರೊಳಗೆ ಸುಪ್ರೀಂ ಅಂತಿಮ ತೀರ್ಪು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.16-ದೇಶಾದ್ಯಂತ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಅಯೋಧ್ಯೆಯ ರಾಮಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ಭೂವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರಿಂಕೋರ್ಟ್ ಇಂದು ಸಂಜೆ  ಅಂತ್ಯಗೊಳಿಸಿದೆ.

ಈ ಪ್ರಕರಣದ ತೀರ್ಪು ನ. 17ರ ಒಳಗೆ ಪ್ರಕಟವಾಗಲಿದ್ದು, ಅಂತಿಮ ಆದೇಶದ ಬಗ್ಗೆ ಭಾರೀ ಕುತೂಹಲ ಕೆರಳಿಸಿದೆ. ಇಂದು 40 ನೇ ದಿನದ ವಿಚಾರಣಾ ಕಲಾಪ ಆರಂಭದಲ್ಲೇ ಸುಪ್ರೀಂಕೋರ್ಟ್‍ನ ಪಂಚ ನ್ಯಾಯಾಧೀಶರ ಸಾಂವಿಧಾನಿಕ ಪೀಠ ಅಯೋಧ್ಯೆ ಪ್ರಕರಣದ ವಿಚಾರಣೆ ಇಂದು ಸಂಜೆ ಅಧಿಕೃತವಾಗಿ ಮುಕ್ತಾಯವಾಗಲಿದೆ ಎಂದು ಘೋಷಿಸಿತ್ತು.

ಇಷ್ಟು ದಿನಗಳ ವಿಚಾರಣೆಗಳು ನಡೆದಿದೆ. ಹಲವು ವರ್ಷಗಳಿಂದ ಈ ಪ್ರಕರಣ ಇತ್ಯರ್ಥವಾಗದೆ ಹಾಗೇ ಉಳಿದಿದೆ. ಇನ್ನೂ ಸಾಕು ಈ ವಿವಾದಕ್ಕೆ ತೆರೆ ಎಳೆಯಬೇಕು. ಯಾವ ಪಕ್ಷಗಾರರಿಗೂ ಹೆಚ್ಚಿನ ಸಮಯ ಕೊಡಲು ಸಾಧ್ಯವೇ ಇಲ್ಲ. ಇಂದು ಸಂಜೆ 5 ಗಂಟೆಗೆ ಈ ಪ್ರಕರಣದ ವಾದ-ವಿವಾದ ಮುಕ್ತಾಯಗೊಳ್ಳಲಿದೆ.ಅಷ್ಟರೊಳಗೆ ಪಕ್ಷಗಾರರು ತಮ್ಮ ವಾದ-ಪ್ರತಿವಾದಗಳನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸ್ಪಷ್ಟವಾಗಿ ಪ್ರಕಟಿಸಿದರು.

ಹಿರಿಯ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್.ಎ.ನಸೀರ್, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಈ ಪಂಚ ನ್ಯಾಯಾಧೀಶ ಪೀಠದಲ್ಲಿದ್ದಾರೆ. ವಿಚಾರಣೆಯ ಕೊನೆಯ ದಿನವಾದ ಇಂದು ರಾಮಮಂದಿರ ಮತ್ತು ಬಾಬರಿ ಮಸೀದಿ ಪರ ವಕಾಲತ್ತು ವಹಿಸಿರುವ ವಕೀಲರು ಮಹತ್ವದ ಸಾಕ್ಷ್ಯಗಳನ್ನು ಸಲ್ಲಿಸಿ ಬಿರುಸಿನ ವಾದ-ಪ್ರತಿವಾದ ನಡೆಸಿದರು.

ಆರಂಭದ ವಿಚಾರಣೆಯಲ್ಲಿ ಹಿಂದೂ ಪರ ವಕೀಲ ಸಿ.ಎಸ್.ವೈದ್ಯನಾಥನ್ ಅವರು, ಸುನ್ನಿ ವಕ್ಫ್ ಮಂಡಳಿ ಈಗಾಗಲೇ ಸಲ್ಲಿಸಿರುವ ಸಾಕ್ಷ್ಯಾಧಾರಕ್ಕೆ ಸಂಬಂಧಪಟ್ಟಂತೆ ಅದರ ವಿರುದ್ಧ ಪ್ರಬಲ ವಾದ ಮಂಡಿಸಿದರು. ಪಕ್ಷಗಾರರ ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ಪಂಚ ನ್ಯಾಯಾಧೀಶರ ಸಾಂವಿಧಾನಿಕ ಪೀಠ 40 ದಿನಗಳ ದೈನಂದಿನ ವಿಚಾರಣೆ ಇಂದು ಮುಕ್ತಾಯವಾಗಿದೆ. ವಾದ ಮತ್ತು ಪ್ರತಿವಾದದ ಪ್ರತಿಗಳನ್ನು ಸಲ್ಲಿಸಲು ಪಕ್ಷಗಾರರಿಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿತು.

ಈ ಅಯೋಧ್ಯೆ ವಿವಾದದಲ್ಲಿ ತೀರ್ಪು ರಾಮಮಂದಿರದ ಪರವಾಗಿ ಪ್ರಕಟವಾಗಲಿದೆಯೇ ಅಥವಾ ಬಾಬ್ರಿ ಮಸೀದಿ ಪರ ನ್ಯಾಯ ನಿರ್ಣಯವಾಗಲಿದೆಯೇ ಎಂಬ ಚರ್ಚೆಗಳು ದೇಶಾದ್ಯಂತ ಆರಂಭವಾಗಿವೆ. ನಿನ್ನೆ ಈ ಪ್ರಕರಣದ 39ನೇ ದಿನದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಅ.16ರಂದೇ (ಇಂದು) ವಿಚಾರಣೆಯ ಕೊನೆಯ ದಿನವಾಗಲಿದೆ ಎಂಬ ಸುಳಿವು ನೀಡಿದ್ದರು.

ವಾದಿ ಮತ್ತು ಪ್ರತಿವಾದಿಗಳಿಗಿಬ್ಬರಿಗೂ ವಾದ-ಪ್ರತಿವಾದ ಮಂಡಿಸಲು ತಲಾ 45 ನಿಮಿಷದಂತೆ 4 ಅವಕಾಶಗಳನ್ನು ನೀಡಲಾಗಿತ್ತು. ಇಂದು ಹಿಂದು ಹಾಗೂ ಮುಸ್ಲಿಂ ದಾವೆದಾರರಿಗೆ ಅಂತಿಮ ವಾದ-ಪ್ರತಿವಾದ ಮತ್ತು ಸಮರ್ಥನೆಗಳ ಮಂಡನೆಗೆ ಅವಕಾಶ ನೀಡಲಾಗಿತ್ತು. ನ್ಯಾಯಪೀಠ ಇಂದು ಸಂಜೆ 5 ಗಂಟೆವರೆಗೂ ನೀಡಲಾಗಿದ್ದ ಸಮಯಕ್ಕೂ ಮೊದಲೇ 4 ಗಂಟೆ ಒಳಗಾಗಿ ಎಲ್ಲ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದೆ.

ಈ ಹಿಂದೆ ಅ. 18 ರೊಳಗೆ ವಾದ ಮುಕ್ತಾಯಗೊಳಿಸಲು ಸಿಜೆಐ ಸೂಚಿಸಿದ್ದರು. ಆದರೆ ಎರಡು ದಿನ ಮುಂಚಿತವಾಗಿಯೆ ಮುಕ್ತಾಯವಾಗುವುದರಿಂದ ತೀರ್ಪು ಕೂಡ ಶೀಘ್ರವೇ ಹೊರಬೀಳುವ ನಿರೀಕ್ಷೆಯಿದೆ. ನವೆಂಬರ್ 17ರಂದು ಸಿಜೆಐ ರಂಜನ್ ಗೊಗೊಯ್ ನಿವೃತ್ತರಾಗಲಿದ್ದು, ಅಷ್ಟರೊಳಗೆ ಪ್ರಕರಣದ ತೀರ್ಪು ಹೊರಬೀಳಲಿದೆ. ಈ ಹಿನ್ನೆಲೆ ಈಗಾಗಲೇ ಅಯೋಧ್ಯೆಯಲ್ಲಿ ಡಿಸೆಂಬರ್ 10ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಅಯೋಧ್ಯೆ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಸಾಧ್ಯ ಎಂದ ಸುಪ್ರಿಂಕೋರ್ಟ್ ತಿಳಿಸಿತ್ತು ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದಿಂದ ಪಂಚ ಸದಸ್ಯರ ಸಾಂವಿಧಾನಿಕ ಪೀಠ ರಚನೆಯಾಗಿತ್ತು. ಅಲ್ಲದೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಮೂವರು ಸದಸ್ಯರನ್ನೊಳಗೊಂಡ ಮಧ್ಯಸ್ಥಿಕೆ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಮಧ್ಯಸ್ಥಿಕೆ ಸಮಿತಿಯ ಸುದೀರ್ಘ ವಿಚಾರಣೆ ನಂತರವೂ ಸಂಧಾನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆ.6ರಿಂದ ಪ್ರಕರಣದ ದಿನನಿತ್ಯದ ವಿಚಾರಣೆ ಪ್ರಾರಂಭಿಸಿತ್ತು.

ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ರಾಮಮಂದಿರ -ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ತೀರ್ಪು ನೀಡಿ ಈ ಪ್ರದೇಶದ 2.77 ಎಕರೆ ಭೂಮಿಯನ್ನು ನಿರ್ಮೋಹಿ ಅಖಾಡ, ರಾಮಲಲ್ಲಾ ಹಾಗೂ ಸುನ್ನಿ ವಕ್ಫ್ ಮಂಡಳಿಗೆ ಸಮನಾಗಿ ಹಂಚಿತ್ತು. ಇದನ್ನು ವಿರೋಧಿಸಿ ಒಟ್ಟು 14 ಅರ್ಜಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ದೀರ್ಘಾವಧಿ ವಿಚಾರಣೆ ನಡೆದಿತ್ತು.

Facebook Comments