ನಾಳೆ ನನಸಾಗಲಿದೆ ಶತಕೋಟಿ ಭಾರತೀಯರ ದಶಕಗಳ ಕನಸು, ಹೇಗಿರುತ್ತೆ ಆ ಐತಿಹಾಸಿಕ ಕ್ಷಣ..? ಇಲ್ಲಿದೆ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ ಆ.4- ಶತಕೋಟಿ ಭಾರತೀಯರು ದಶಕಗಳಿಂದ ಚಾತಕಪಕ್ಷಿಯಂತೆ ಕಾಯುತ್ತಿದ್ದ ಐತಿಹಾಸಿಕ ಕ್ಷಣ ನಾಳೆ ನನಸಾಗುವುದರೊಂದಿಗೆ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ.

ಹಿಂದೂಗಳ ಆರಾಧ್ಯದೈವ ಮರ್ಯಾದ ಪುರುಷೋತ್ತಮ ಎಂದೇ ಕರೆಯುವ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಇಡೀ ಭಾರತೀಯರು ತುದಿಗಾಲಿನಲ್ಲಿ ನಿಂತಿದ್ದಾರೆ.

ಕೋವಿಡ್-19 ಭೀತಿಯ ನಡುವೆಯೂ ನಾಳೆ ಶ್ರೀರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ಆನಂದಿ ಬೆನ್ ಪಟೇಲ್, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಮ ಜನ್ಮಭೂಮಿ ಟ್ರಸ್ಟ್‍ನ ಮುಖ್ಯಸ್ಥ ನೃತ್ಯಗೋಪಾಲ್‍ದಾಸ್ ಮಹಾರಾಜ್ ಮಾತ್ರ ಭಾಗವಹಿಸಲಿದ್ದಾರೆ.

ನಾಳೆ ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ 175 ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. 175 ಅತಿಥಿಗಳ ಪೈಕಿ 135 ಮಂದಿ ಸಾಧು-ಸಂತರಿದ್ದಾರೆ. ಕಾರ್ಯಕ್ರಮಕ್ಕೆ ನೇಪಾಳದ ಸಂತರಿಗೂ ಆಹ್ವಾನ ನೀಡಿರುವುದು ವಿಶೇಷ. ಅಶೋಕ್ ಸಿಂಘಾಲ್ ಕುಟುಂಬ ಪ್ರತಿನಿಧಿಸುವ ಮಹೇಶ್ ಭಗಚಂದ್ಕಾ ಮತ್ತು ಪವನ್ ಸಿಂಘಾಲ್‍ಗೆ ಆಹ್ವಾನ ನೀಡಲಾಗಿದೆ.

ನಾಳೆ ಮಧ್ಯಾಹ್ನ 12 ಗಂಟೆ 44 ನಿಮಿಷ, 8 ಸೆಕೆಂಡ್‍ನಿಂದ 12 ಗಂಟೆ 44 ನಿಮಿಷ, 40 ಸೆಕೆಂಡ್‍ಗೆ ಸಲ್ಲುವ ವಿಶೇಷ ಶುಭ ಮುಹೂರ್ತದಲ್ಲಿ ಕೇವಲ 32 ಸೆಕೆಂಡ್ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.

ಬುಧವಾರ ಬೆಳಗ್ಗೆ 11.15ಕ್ಕೆ ಸಾಕೇತ್ ಕಾಲೇಜ್‍ನ ಹೆಲಿಪ್ಯಾಡ್‍ಗೆ ಮೋದಿ ಆಗಮಿಸಲಿದ್ದಾರೆ. ಹೆಲಿಪ್ಯಾಡ್‍ನಿಂದ ನೇರವಾಗಿ ಹನುಮಾನ್ ಗುಡಿಗೆ ತೆರಳಲಿದ್ದಾರೆ. ಹನುಮಾನ್ ಗುಡಿಯಲ್ಲಿ 7 ನಿಮಿಷಗಳ ಕಾಲ ನಡೆಯುವ ಪೂಜೆಯಲ್ಲಿ ಭಾಗಿಯಾಗಿ ಬಳಿಕ ರಾಮಜನ್ಮಭೂಮಿಗೆ ಗೇಟ್ ನಂ.3ರ ಮೂಲಕ ಆಗಮಿಸಲಿದ್ದಾರೆ.

ರಾಮ್‍ಲಲ್ಲಾ ದರ್ಶನ ಮಾಡಿ 15 ನಿಮಿಷಗಳ ಕಾಲ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ರಾಮ್‍ಲಲ್ಲಾ ದರ್ಶನ ಮಾಡುವ ಮೊದಲ ಪ್ರಧಾನಿ ಎಂಬ ಖ್ಯಾತಿಗೆ ಪಾತ್ರವಾಗಲಿದ್ದಾರೆ.

ಮಧ್ಯಾಹ್ನ 12.15ಕ್ಕೆ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರೊಬ್ಬರ ಪ್ರಕಾರ, ನಾಳೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಇನ್ನು, ಅಭಿಜಿನ್ ಮುಹೂರ್ತ ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ಮಹಂತ್ ನೃತ್ಯಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಮಹಂತ್ ಕಮಲ್ ನಯನ್ ದಾಸ್ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಉನ್ನತ ಶ್ರೇಣಿಯ ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇವರೆಲ್ಲರಿಗೂ ಪಿಎಂ ಮೋದಿ ಜೊತೆಯಲ್ಲೇ ಆಸನದ ವ್ಯವಸ್ಥೆ ಮಾಡಲಾಗಿದೆ.

ಅಯೋಧ್ಯೆ ಭೂ ವಿವಾದ ಪ್ರಕರಣದ ಮಾಜಿ ದಾವೆದಾರ ಇಕ್ಬಾಲ್ ಅನ್ಸಾರಿ ಮತ್ತು ಮೊಹಮ್ಮದ್ ಷರೀಫ್ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಬಿಜೆಪಿಯ ಹಿರಿಯ ಮುಖಂಡರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇಡೀ ಅಯೋಧ್ಯೆ ನಗರ ತಳಿರುತೋರಣಗಳಿಂದ ಮಧುವಣಗಿತ್ತಿಯಂತೆ ಶೃಂಗರಿಸಲಾಗಿದ್ದು, ತೇತ್ರಾಯುಗದ ವೈಭವವನ್ನು ಮರುಕಳಿಸುವಂತೆ ಕಂಗೊಳಿಸುತ್ತಿದೆ.

ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಇಂದು ಸರಾಯು ನದಿಯ ತಟದಲ್ಲಿ ಸಾಧುಸಂತರು, ಧಾರ್ಮಿಕ ಮುಖಂಡರು ವಿಶೇಷ ಪೂಜೆ, ಯಜ್ಞ, ಹೋಮಹವನವನ್ನು ನಡೆಸುತ್ತಿದ್ದಾರೆ.

ಬೆಳಗ್ಗೆ ವಿಶೇಷ ವಿಮಾನದಲ್ಲಿ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸುವ ಮುನ್ನ ಹನುಮಾನ್ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಈಗಾಗಲೇ ಹನುಮಾನ್‍ಗುಡಿಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಮೊದಲು ದೇವಾಲಯಕ್ಕೆ ಭೇಟಿ ನೀಡಲಿರುವ ನರೇಂದ್ರ ಮೋದಿ ಬಳಿಕ ರಾಮ ಮಂದಿರ ಶಂಕು ಸ್ಥಾಪನೆ ಸ್ಥಳಕ್ಕೆ ತೆರಳಲಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಭೇಟಿ ನೀಡಿ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದ್ದಾರೆ.

ಇವರೆಲ್ಲರಿಗೂ ಪಿಎಂ ಮೋದಿ ಜೊತೆಯಲ್ಲೇ ಆಸನದ ವ್ಯವಸ್ಥೆ ಮಾಡಲಾಗಿದೆ. ಅಯೋಧ್ಯೆ ಭೂ ವಿವಾದ ಪ್ರಕರಣದ ಮಾಜಿ ದಾವೆದಾರ ಇಕ್ಬಾಲ್ ಅನ್ಸಾರಿ ಮತ್ತು ಮೊಹಮ್ಮದ್ ಷರೀಫ್ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಎಂ.ಎಂ. ಜೋಶಿ, ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್, ಭೂಮಿಪೂಜೆಯಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗಿದೆ.

ನಿನ್ನೆಯೇ 12 ಮಂದಿ ಪುರೋಹಿತರು ಗಣೇಶನಿಗೆ ಪೂಜೆ, ಪ್ರಾರ್ಥನೆ ಸಲ್ಲಿಸುವುದರ ಮೂಲಕ ರಾಮ ಮಂದಿರ ಭೂಮಿ ಪೂಜೆಯ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಿದ್ದಾರೆ. ಇಂದು ಅಯೋಧ್ಯೆಯ ಹನುಮಗುಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಭಾಗಿಯಾಗಲು 200 ಜನ ಗಣ್ಯ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 175 ಜನ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈ ಪೈಕಿ ವಿವಿಧ ಪಂಥ, ಸಂಪ್ರದಾಯಗಳಿಗೆ ಸೇರಿದ 135 ಸಂತರನ್ನು ಆಹ್ವಾನಿಸಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚಿನ ಜನ ಭಾಗವಹಿಸದೇ ಇರುವ ಪರಿಸ್ಥಿತಿ ಉಂಟಾಗಿರುವುದರಿಂದ ಅಯೋಧ್ಯೆಯ ಹೊರಗಿರುವ ಭಕ್ತಾದಿಗಳಿಗೆ ತಾವಿರುವಲ್ಲಿಯೇ ಭಜನೆ, ಕೀರ್ತನೆಗಳ ಮೂಲಕ ರಾಮನನ್ನು ಪ್ರಾರ್ಥಿಸುವಂತೆ ಟ್ರಸ್ಟ್ ಮನವಿ ಮಾಡಿದೆ.

Facebook Comments

Sri Raghav

Admin