ಜೈ ಶ್ರೀರಾಮ್ : ನನಸಾಗಲಿದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.9- ಅಯೋಧ್ಯೆಯ ವಿವಾದಾತ್ಮಕ ಸ್ಥಳದಲ್ಲೇ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ಹಸಿರುನಿಶಾನೆ ತೋರುವ ಮೂಲಕ ಶತಮಾನದ ವಿವಾದಕ್ಕೆ ತೆರೆ ಎಳೆದು ಸರ್ವಾನುಮತದ ಐತಿಹಾಸಿಕ ತೀರ್ಪು ನೀಡಿದೆ. ಈ ಶತಮಾನದಲ್ಲೇ ಅತ್ಯಂತ ಮಹತ್ವದ ತೀರ್ಪು ಇದಾಗಿದ್ದು, ಅಯೋಧ್ಯೆಯ ವಿವಾದಾತ್ಮಕ 2.77 ಎಕರೆ ಸ್ಥಳ ರಾಮ್‍ಲಲ್ಲಾ ಒಡೆತನಕ್ಕೆ ಸೇರಿದೆ ಎಂದು ತೀರ್ಪು ನೀಡಿ ರಾಮಮಂದಿರ ನಿರ್ಮಾಣವನ್ನು ಕೇಂದ್ರ ಸರ್ಕಾರಕ್ಕೆ ಹೊಣೆ ವಹಿಸಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್, ನ್ಯಾಯಮೂರ್ತಿಗಳ ಎಸ್.ಎ.ಬೋಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಅಬ್ದುಲ್ ನಜೀರ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ 30 ನಿಮಿಷದಲ್ಲೇ ಶತಮಾನದ ವಿವಾದಕ್ಕೆ ಮುಕ್ತಿ ನೀಡಿತು.

ಸುಪ್ರೀಂ ಕೋರ್ಟ್‍ನ ಸಾಂವಿಧಾನಿಕ ಪೀಠ, ಕೇವಲ ನಂಬಿಕೆಗಳಿಂದ ಭೂಮಿಯ ಹಕ್ಕುದಾರಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಜತೆಗೆ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದೇ ತಿಂಗಳ 17ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ನವೆಂಬರ್ 17ರಂದು ತೀರ್ಪು ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಿದೆ.

ಈವರೆಗೂ ಅಯೋಧ್ಯೆಯ ರಾಮಜನ್ಮ ಭೂಮಿ ತನಗೆ ಸೇರಬೇಕೆಂದು ಪ್ರತಿಪಾದಿಸಿದ್ದ ಸುನ್ನಿ ವಕ್ಫ್ ಬೋರ್ಡ್‍ಗೆ ಅಯೋಧ್ಯೆಯಲ್ಲೇ 5 ಎಕರೆ ಪರ್ಯಾಯ ಜಮೀನು ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಅಲ್ಲೇ ಮಸೀದಿ ನಿರ್ಮಿಸುವ ನಿರ್ಧಾರ ಈ ಮಂಡಳಿಯ ವಿವೇಚನೆಗೆ ಬಿಟ್ಟಿದು ಎಂದು ಸಹ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಅಲ್ಲದೆ ಈ ಜಮೀನು ತನಗೇ ನೀಡಬೇಕೆಂದು ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದ ನಿರ್ಮೋಹಿ ಅಖಾಡ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ರಾಮಮಂದಿರ ನಿರ್ಮಾಣ ಕುರಿತಂತೆ ಕೇಂದ್ರ ಸರ್ಕಾರ ಮೂರು ತಿಂಗಳೊಳಗೆ ಯೋಜನೆಯನ್ನು ರೂಪಿಸಬೇಕು. ಭೂಮಿಯ ಸ್ವಾಧೀನವನ್ನು ಟ್ರಸ್ಟ್ ರಚಿಸಿ ಇವರಿಗೆ ಹಸ್ತಾಂತರ ಮಾಡಬೇಕೆಂದು ನ್ಯಾಯಪೀಠ ಸೂಚನೆ ಕೊಟ್ಟಿದೆ.

ಅಯೋಧ್ಯೆಯ ವಿವಾದಿತ ಜಾಗದಲ್ಲಿ ಬಾಬ್ರಿ ಮಸೀದಿಯ ಕೆಳಭಾಗದಲ್ಲಿ ಸಿಕ್ಕ ಉತ್ಖನನಗಳು ಇಸ್ಲಾಂಗೆ ಸೇರಿದ್ದು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್‍ಐ) ಸ್ಪಷ್ಟಪಡಿಸಿದೆ. ಕೇವಲ ನಂಬಿಕೆಗಳ ಮೇಲೆ ಇಲ್ಲಿ ಪ್ರಾರ್ಥನೆ ಮಾಡಲಾಗುತ್ತಿತ್ತು. ನಾವು ನಂಬಿಕೆಯ ಮೇಲೆ ಭೂಮಿಯ ಹಕ್ಕನ್ನು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಹುಟ್ಟಿದ್ದ ಎಂಬುದು ಇತಿಹಾಸಕಾರರು, ಬರಹಗಾರರ ನಂಬಿಕೆಯಾಗಿದೆ.

ಸೀತಾರಸೋಯ್, ರಾಮ್ ಚಬೂತ್ರ, ಭಂಡಾರ್‍ಗಳು ರಾಮ ಇಲ್ಲಿಯೇ ಜನಿಸಿದ್ದ ಎಂಬುದಕ್ಕೆ ಪುಷ್ಠಿ ನೀಡುತ್ತಿವೆ. ನಮಗೆ ಎಲ್ಲಾ ಧರ್ಮಗಳು ಒಂದೇ. ನ್ಯಾಯಾಧೀಶರಿಗೆ ಧರ್ಮ ಮತ್ತು ಜಾತಿಯ ನಿಬಂಧನೆಗಳು ಇರುವುದಿಲ್ಲ ಎಂದು ಉಲ್ಲೇಖ ಮಾಡಲಾಗಿದೆ.1856-57ರ ಸಂದರ್ಭದಲ್ಲಿ ಈ ಜಾಗದಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದರು ಎಂಬುದು ನಂಬಿಕೆಯಷ್ಟೇ. ಇದೇ ಅವಧಿಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ಅಲ್ಲಿ ಗರ್ಭಗುಡಿ ಮುಂದೆ ಹಾಕುವ ಕಬ್ಬಿಣದ ಕಂಬಿಗಳು ಇತ್ತು ಎಂಬುದು ಇತಿಹಾಸದಿಂದ ಸ್ಪಷ್ಟವಾಗಿದೆ.

ನಂತರ ಬ್ರಿಟಿಷರು ಈ ಜಾಗವನ್ನು ತಮ್ಮ ವಶಕ್ಕೆ ಪಡೆದು ಬೇಲಿ ಹಾಕಿದರು. ಬಳಿಕ ಜಾಗ ವಿವಾದಾತ್ಮಕವಾಗಿಯೇ ಉಳಿದಿತ್ತು. 1992 ಡಿಸೆಂಬರ್ 6ರಂದು ಮಸೀದಿಯನ್ನು ಧ್ವಂಸ ಮಾಡಿದ್ದು ಧಾರ್ಮಿಕ ಹಕ್ಕುಗಳ ಉಲ್ಲಂಘನೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ರಾಮಜನ್ಮಭೂಮಿ ಪ್ರಕರಣದ ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿಗಳು ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿದ್ದು,ನ್ಯಾಯಾಲಯ ದೇಶದ ಸಮತೋಲನ ಕಾಪಾಡಬೇಕು. ಬಾಬರ್ ಆದೇಶದ ಮೇಲೆ ಮಸೀದಿ ನಿರ್ಮಿಸಲಾಗಿದೆ.1949ರಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ವಾದಿಸಿದ್ದಾರೆ. ನಮ್ಮ ಸಂವಿಧಾನ ನಿರ್ಮಾಣ ಆಗಿರೋದು ಜ್ಯಾತ್ಯಾತೀತ ತತ್ವದಡಿಯಲ್ಲಿ. ಜ್ಯಾತ್ಯಾತೀತತೆ ಉಳಿಸೋದು ಸಂವಿಧಾನದ ಮೂಲ ಆಶಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

# ಮೂರು ತಿಂಗಳಲ್ಲಿ ಟ್ರಸ್ಟ್ ರಚಿಸಲು ಕೇಂದ್ರಕ್ಕೆ ಸುಪ್ರೀಂ ಆದೇಶ:
ಮಸೀದಿಯಲ್ಲಿ ನಮಾಜ್ ಮಾಡುವ ನಂಬಿಕೆ ಪ್ರಶ್ನಿಸಲು ಸಾಧ್ಯವಿಲ್ಲ. ನ್ಯಾಯಾಲಯ ನಂಬಿಕೆ ಮತ್ತು ಸಾಕ್ಷಿ ಆಧಾರದಲ್ಲಿ ಕೆಲಸ ನಿರ್ವಹಣೆ ಮಾಡುತ್ತದೆ ಎಂದ ಸುಪ್ರೀಂ, ನ್ಯಾಯಾಲಯ ದೇಶದ ಸಮತೋಲನ ಕಾಪಾಡಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಬಾಬರ್ ಆದೇಶದ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂಬುದು ಸಾಕ್ಷಿ ಸಮೇತ ಬೆಳಕಿಗೆ ಬಂದಿದೆ. 1949ರಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ವಾದಿಸಿದ್ದಾರೆ. ರಾಮ ಜನ್ಮ ಭೂಮಿ ನ್ಯಾಯಶಾಸ್ತ್ರವಾಗಿ ಇಲ್ಲ, ಹಾಗೇ ಬಾಬ್ರಿ ಮಸೀದಿಯೂ ಖಾಲಿ ಜಾಗದಲ್ಲಿ ಕಟ್ಟಿಲ್ಲ. ಅಲ್ಲಿ ಈ ಹಿಂದೆ ಯಾವುದೋ ಕಟ್ಟಡ ಇತ್ತು ಎನ್ನುವುದಕ್ಕೆ ಸಾಕ್ಷಿಯಿದೆ.

ಅಲ್ಲಿದ್ದ ಕಟ್ಟಡ ಮುಸ್ಲಿಮೇತರ ಕಟ್ಟಡ ಎಂಬುದನ್ನು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ. 12ನೇ ಶತಮಾನದ ಕಟ್ಟಡ ಆಗಿದ್ದರೂ ಅದು ದೇಗುಲ ಎಂದು ಹೇಳಿಲ್ಲ. ಹಿಂದೂಗಳ ಪ್ರಕಾರ ಆ ಜಾಗ ರಾಮನ ಜನ್ಮಭೂಮಿ. ಶ್ರೀರಾಮ ಇಲ್ಲೇ ಹುಟ್ಟಿದ್ದು ಎಂಬ ನಂಬಿಕೆ ಇದೆ. ಹಿಂದೂಗಳ ನಂಬಿಕೆಯನ್ನೂ ನಾವು ತೆಗೆದು ಹಾಕಲು ಆಗಲ್ಲ ಎಂದು ಸುಪ್ರೀಂ ಆದೇಶದಲ್ಲಿ ತಿಳಿಸಿತು.

ಕಟ್ಟಡದ ಮಧ್ಯಭಾಗದಲ್ಲಿ ಶ್ರೀರಾಮ ಹುಟ್ಟಿದ್ದು ಅನ್ನೋದು ವಾದ. ನಂಬಿಕೆ ಎಂದಾಗ ಮಧ್ಯ ಪ್ರವೇಶ ಸರಿಯಲ್ಲ. ನಂಬಿಕೆಗಳನ್ನು ಕೋರ್ಟ್ ಒಪ್ಪಬೇಕಾಗುತ್ತೆ. ಹಿಂದೂಗಳ ಪ್ರಕಾರ ಇದು ಶ್ರೀರಾಮನ ಜನ್ಮಭೂಮಿ. ಮುಸ್ಲೀಮರ ಪ್ರಕಾರ ಇದು ಐತಿಹಾಸಿಕ ಮಸೀದಿ ಕಟ್ಟಡ . ಯಾರ ನಂಬಿಕೆಗಳನ್ನು ಕೋರ್ಟ್ ಪ್ರಶ್ನೆ ಮಾಡುವುದಿಲ್ಲ ಎಂದ ಕೋರ್ಟ್ ಕೇವಲ ನಂಬಿಕೆ ಆಧಾರದ ಮೇಲೆ ಭೂಹಕ್ಕು ಸ್ಥಾಪನೆ ಸಾಧ್ಯವಿಲ್ಲ ಎಂದೂ ಸ್ಪಷ್ಟವಾಗಿ ತಿಳಿಸಿತು.

Facebook Comments

Sri Raghav

Admin