ಬ್ರೇಕಿಂಗ್ : ಅಯೋಧ್ಯೆ ತೀರ್ಪು ಮರುಪರಿಶೀಲನೆಗೆ ಸಲ್ಲಿಸಿದ್ದ ಅಷ್ಟೂ ಅರ್ಜಿಗಳು ವಜಾ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.12- ಅಯೋಧ್ಯಾ ರಾಮಮಂದಿರ ನಿರ್ಮಾಣ ಕುರಿತಂತೆ ಸಲ್ಲಿಕೆಯಾಗಿದ್ದ ಎಲ್ಲಾ 18 ಮರು ಪರಿಶೀಲನಾ ಅರ್ಜಿಗಳನ್ನು ಸರ್ವೋಚ್ಛ ನ್ಯಾಯಾಲಯ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ , ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಎ.ನಜೀರ್, ಡಿ.ವೈ.ಚಂದ್ರಚೂಡ್ ಹಾಗೂ ಸಂಜೀವ್ ಖನ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಹಿಂದಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯ ಪೀಠ ಕಳೆದ ನವೆಂಬರ್ 9ರಂದು ಅಯೋಧ್ಯೆಯ ವಿವಾದಿತ 2.77 ಎಕರೆ ಭೂಮಿಯನ್ನು ರಾಮ್‍ಲಲ್ಲಾಗೆ ಹಸ್ತಾಂತರಿಸಬೇಕು. ಮಾತ್ರವಲ್ಲ ರಾಮಮಂದಿರ ನಿರ್ಮಾಣ ಟ್ರಸ್ಟ್ ರಚಿಸಿ ಮಂದಿರ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿ ಚಾರಿತ್ರಿಕ ತೀರ್ಪು ನೀಡಿತ್ತು.

ಇದರ ಜತೆಗೆ ಸುನ್ನಿ ವಕ್ಫ್ ಬೋರ್ಡ್‍ಗೆ ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ 5 ಎಕರೆ ಜಮೀನು ನೀಡುವಂತೆಯೂ ಸೂಚಿಸಿ ಶತಮಾನದ ವಿವಾದಕ್ಕೆ ತೆರೆ ಎಳೆದಿತ್ತು. ಅಯೋಧ್ಯೆ ವಿವಾದ ಕುರಿತಂತೆ ಸಾಂವಿಧಾನಿಕ ಪೀಠದ ಈ ಚಾರಿತ್ರಿಕ ತೀರ್ಪನ್ನು ಮರು ಪರಿಶೀಲಿಸುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ನಿರ್ಮೋಹಿ ಅಖಾಡ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ವತಿಯಿಂದ 18 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಈ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸಿಜೆಐ ಬೊಬ್ಡೆ ನೇತೃತ್ವದ ವಿಭಾಗೀಯ ಪೀಠ 18 ಅರ್ಜಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

Facebook Comments