ಅಯೋಧ್ಯೆ ತೀರ್ಪಿನ ಬಗ್ಗೆ ಪಾಕಿಗಳ ಪ್ರತಿಕ್ರಿಯೆ ಏನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್,ನ.9- ಅಯೋಧ್ಯೆಯಲ್ಲಿನ ರಾಮಮಂದಿರ-ಬಾಬ್ರಿ ಮಸೀದಿ ಭೂ ವಿವಾದ ಕುರಿತು ಸುಪ್ರೀಂಕೋರ್ಟ್ ಇಂದು ನೀಡಿರುವ ಐತಿಹಾಸಿಕ ತೀರ್ಪಿನ ಬಗ್ಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಇಸ್ಲಾಮಾಬಾದ್‍ನಲ್ಲಿ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಮೆಹಮೂದ್ ಖುರೇಷಿ ಸುಪ್ರೀಂಕೋರ್ಟ್ ತೀರ್ಪನ್ನು ಈ ಸಮಯದಲ್ಲಿ ಪ್ರಕಟಿಸುವ ಅಗತ್ಯವೇನಿತ್ತು.

ಕೆಲವು ದಿನಗಳ ನಂತರ ಘೋಷಿಸಬಹುದಾಗಿತ್ತು ಎಂದು ತಿಳಿಸಿದ್ದಾರೆ. ಇಂದು ಪಾಕಿಸ್ತಾನದ ಕರ್ತಾರ್‍ಪುರ್‍ನಲ್ಲಿ ಗುರುನಾನಕ್ ದೇವ್ ಅವರ 550ನೇ ಜನ್ಮ ದಿನ ಜಯಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಿಖ್ ಸಮುದಾಯದವರೆಲ್ಲ ಸಂತಸದಲ್ಲಿದ್ದಾರೆ.  ಆದರೆ ಇದೇ ವೇಳೆ ಮುಸ್ಲಿಂ ಸಮುದಾಯಕ್ಕೆ ಘಾಸಿ ಉಂಟು ಮಾಡುವಂತಹ ನೋವಿನ ತೀರ್ಪನ್ನು ಪ್ರಕಟಿಸಿದ್ದು ಸರಿಯೇ ಎಂದು ಖುರೇಷಿ ಪ್ರಕಟಿಸಿದ್ದಾರೆ.

# ಐತಿಹಾಸಿಕ ತೀರ್ಪು :
ಅಯೋಧ್ಯೆಯ ವಿವಾದಾತ್ಮಕ ಸ್ಥಳದಲ್ಲೇ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ಹಸಿರುನಿಶಾನೆ ತೋರುವ ಮೂಲಕ ಶತಮಾನದ ವಿವಾದಕ್ಕೆ ತೆರೆ ಎಳೆದು ಸರ್ವಾನುಮತದ ಐತಿಹಾಸಿಕ ತೀರ್ಪು ನೀಡಿದೆ. ಈ ಶತಮಾನದಲ್ಲೇ ಅತ್ಯಂತ ಮಹತ್ವದ ತೀರ್ಪು ಇದಾಗಿದ್ದು, ಅಯೋಧ್ಯೆಯ ವಿವಾದಾತ್ಮಕ 2.77 ಎಕರೆ ಸ್ಥಳ ರಾಮ್‍ಲಲ್ಲಾ ಒಡೆತನಕ್ಕೆ ಸೇರಿದೆ ಎಂದು ತೀರ್ಪು ನೀಡಿ ರಾಮಮಂದಿರ ನಿರ್ಮಾಣವನ್ನು ಕೇಂದ್ರ ಸರ್ಕಾರಕ್ಕೆ ಹೊಣೆ ವಹಿಸಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್, ನ್ಯಾಯಮೂರ್ತಿಗಳ ಎಸ್.ಎ.ಬೋಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಅಬ್ದುಲ್ ನಜೀರ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ 30 ನಿಮಿಷದಲ್ಲೇ ಶತಮಾನದ ವಿವಾದಕ್ಕೆ ಮುಕ್ತಿ ನೀಡಿತು.

ಸುಪ್ರೀಂ ಕೋರ್ಟ್‍ನ ಸಾಂವಿಧಾನಿಕ ಪೀಠ, ಕೇವಲ ನಂಬಿಕೆಗಳಿಂದ ಭೂಮಿಯ ಹಕ್ಕುದಾರಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಜತೆಗೆ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದೇ ತಿಂಗಳ 17ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ನವೆಂಬರ್ 17ರಂದು ತೀರ್ಪು ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಿದೆ.

ಈವರೆಗೂ ಅಯೋಧ್ಯೆಯ ರಾಮಜನ್ಮ ಭೂಮಿ ತನಗೆ ಸೇರಬೇಕೆಂದು ಪ್ರತಿಪಾದಿಸಿದ್ದ ಸುನ್ನಿ ವಕ್ಫ್ ಬೋರ್ಡ್‍ಗೆ ಅಯೋಧ್ಯೆಯಲ್ಲೇ 5 ಎಕರೆ ಪರ್ಯಾಯ ಜಮೀನು ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಅಲ್ಲೇ ಮಸೀದಿ ನಿರ್ಮಿಸುವ ನಿರ್ಧಾರ ಈ ಮಂಡಳಿಯ ವಿವೇಚನೆಗೆ ಬಿಟ್ಟಿದು ಎಂದು ಸಹ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಅಲ್ಲದೆ ಈ ಜಮೀನು ತನಗೇ ನೀಡಬೇಕೆಂದು ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದ ನಿರ್ಮೋಹಿ ಅಖಾಡ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ರಾಮಮಂದಿರ ನಿರ್ಮಾಣ ಕುರಿತಂತೆ ಕೇಂದ್ರ ಸರ್ಕಾರ ಮೂರು ತಿಂಗಳೊಳಗೆ ಯೋಜನೆಯನ್ನು ರೂಪಿಸಬೇಕು. ಭೂಮಿಯ ಸ್ವಾಧೀನವನ್ನು ಟ್ರಸ್ಟ್ ರಚಿಸಿ ಇವರಿಗೆ ಹಸ್ತಾಂತರ ಮಾಡಬೇಕೆಂದು ನ್ಯಾಯಪೀಠ ಸೂಚನೆ ಕೊಟ್ಟಿದೆ.

Facebook Comments

Sri Raghav

Admin