ಸದ್ಯದಲ್ಲಿಯೇ ಕೊರೊನಾಗೆ ಬರಲಿದೆ ಆಯುರ್ವೇದ ಔಷಧಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.5- ಜಗತ್ತಿನ ಯಾವ ಭಾಗದಲ್ಲಾಗಲಿ ಈಗ ಕಾಡುತ್ತಿರುವ ಆರೋಗ್ಯ ಸಮಸ್ಯೆಗೆ ಪರಿಹಾರ ಹುಡುಕುವುದೇ ಒಂದು ದೊಡ್ಡ ಸವಾಲು. ಇಡೀ ವಿಶ್ವದಲ್ಲಿಯೇ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವ ಹಣ ನೋಡಿದರೆ ನಿಜಕ್ಕೂ ದಂಗು ಬಡಿಸುವಂತಾಗುತ್ತದೆ.

ಮುಂದುವರೆದ ರಾಷ್ಟ್ರಗಳಲ್ಲಿ ಈಗಾಗಲೇ ಜನರ ಆರೋಗ್ಯಕ್ಕಾಗಿ ಪ್ರಥಮ ಆದ್ಯತೆ ನೀಡಲಾಗುತ್ತದೆ. ಮುಂದುವರೆದ ದೇಶಗಳಲ್ಲೂ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಇದ್ದರೂ ಕೂಡ ಇನ್ನು ಹತ್ತು ಹಲವಾರು ಭಯಂಕರ ಕಾಯಿಲೆಗಳಿಗೆ ಜನರು ಸಾವನ್ನಪ್ಪುತ್ತಿದ್ದಾರೆ.

ಇದರ ನಡುವೆ ನಮ್ಮ ಪುರಾತನ ಹಾಗೂ ಭರವಸೆಯ ಆಯುರ್ವೇದ ಭಾರತ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ. ಹಿಂದೆ ನಮ್ಮ ಮಹಾಮುನಿಗಳಾದ ಚರಕ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು ಎಂಬ ದಾಖಲೆಗಳು ಇವೆ. ಇಷ್ಟು ಸಾವಿರಾರು ವರ್ಷಗಳ ಹಿಂದಿನ ಆರೋಗ್ಯ ಪದ್ಧತಿಯಲ್ಲಿ ಆಯುರ್ವೇದ ತನ್ನದೇ ಆದ ಹಿರಿಮೆ ಇದೆ.

ಆದರೆ ಭಾರತದಲ್ಲಿ ಇದರ ಬಗ್ಗೆ ತಾತ್ಸಾರ ಮನೋಭಾವ ತಳೆದು ರೋಗ ರುಜಿನಗಳು ಹೆಚ್ಚಾದಾಗ ಆಯುರ್ವೇದದ ಪರಿಕಲ್ಪನೆ ಮತ್ತೆ ಚಾಲ್ತಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕ ಆಯುಷ್ ಇಲಾಖೆಯನ್ನೇ ಸ್ಥಾಪಿಸಿ ಈ ಆಯುರ್ವೇದ , ಯುನಾನಿ, ಸಿದ್ಧ ಔಷಧಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.

ಆಹಾರ-ವಿಹಾರದಿಂದಲೇ ರೋಗವನ್ನು ತಡೆಗಟ್ಟಬಹುದು. ಇದರಲ್ಲಿ ಆಯುರ್ವೇದ ಔಷಧಿಗಳು ಪರಿಣಾಮಕಾರಿ ಎಂದು ರಾಜ್ಯ ಆಯುಷ್ ಇಲಾಖೆಯ ಡ್ರಗ್ ಕಂಟ್ರೋಲರ್ ಅಂಡ್ ಲೈಸೆನ್ಸಿಂಗ್ ಅಥಾರಟಿ ನಿರ್ದೇಶನಾಲಯದ ಮುಖ್ಯಸ್ಥ ಡಾ.ಎಚ್. ವೈ.ರಾಥೋಡ್ ತಿಳಿಸಿದ್ದಾರೆ.

ಕೊರೊನಾ ಮಹಾಮಾರಿಯನ್ನು ಗುಣಪಡಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಿ ಹಾಗೂ ಖಾಸಗಿ ಆಯುರ್ವೇದ ಸಂಸ್ಥೆಗಳು ಪರೀಕ್ಷೆಯನ್ನು ಮುಂದುವರೆಸಿದೆ. ಮಹತ್ವದ ಬೆಳವಣಿಗೆಯಲ್ಲಿ ಈಗ ಈ ಸೋಂಕನ್ನು ನಿವಾರಿಸುವ ಬಲವಾದ ಲಕ್ಷಣಗಳನ್ನು ಹೊಂದಿರುವ ಔಷಧವೊಂದನ್ನು ಐಎಂಆರ್‍ಸಿಗೆ ಕಳುಹಿಸಿಕೊಡಲಾಗಿದ್ದು , ಇದರ ಬಳಕೆಗೆ ಅನುಮತಿ ನೀಡಲಾಗಿದೆ ಎಂದು  ಹೇಳಿದ್ದಾರೆ.

ಕೇಂದ್ರ, ಆರೋಗ್ಯ ಸಚಿವರು ಕೂಡ ನವೆಂಬರ್‍ವೊಳಗೆ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಅದರಂತೆ ಆಯುಷ್ ಇಲಾಖೆಯ ವೈದ್ಯರು ಕೂಡ ತಮ್ಮದೇ ಆದ ಸಂಶೋಧನೆಯಲ್ಲಿ ತೊಡಗಿದ್ದು, ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಸದ್ಯದಲ್ಲಿಯೇ ನಮಗೆ ಆಯುರ್ವೇದ ಔಷಧ ಬಳಸಲು ಅನುಮತಿ ಸಿಗುವ ವಿಶ್ವಾಸವಿದೆ.

ಈಗಾಗಲೇ ನಮ್ಮ ಆಯುಷ್ ಇಲಾಖೆಗೆ ಒಳಪಡುವಂತಹ ಎಲ್ಲಾ ಆಸ್ಪತ್ರೆಗಳಲ್ಲಿ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವಂತಹ ಔಷಧಗಳನ್ನು ಸರಬರಾಜು ಮಾಡಲಾಗಿದೆ. ನಮ್ಮ ಪೊಲೀಸ್ ಇಲಾಖೆ ಸೇರಿದಂತೆ ಅನೇಕ ಸರ್ಕಾರಿ ಇಲಾಖೆಗಳು ಔಷಧಗಳನ್ನು ಪೂರೈಸಲಾಗಿದೆ.

ಆಯುರ್ವೇದ ಔಷಧಿಗಳು ಎಲ್ಲೂ ಕೂಡ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗಿದೆ. ಈಗಾಗಲೇ ನಮ್ಮ 30 ನಿರೀಕ್ಷಕರು (ಹೆಲ್ತ್ ಇನ್ಸ್‍ಪೆಕ್ಟರ್) ಇದರ ಬಗ್ಗೆ ನಿಗಾ ವಹಿಸಲಿದ್ದಾರೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಮನೆಗಳಲ್ಲಿ ಸೇವಿಸುವ ಆಹಾರದ ಬಗ್ಗೆಯೂ ಗಮನ ಹರಿಸಬೇಕು. ಬದಲಾದ ಜೀವನ ಶೈಲಿಯಲ್ಲಿ ದೇಹಕ್ಕೆ ಒಗ್ಗದಂತಹ ಪದಾರ್ಥಗಳನ್ನು ಸೇವಿಸುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ.

ಆದ್ದರಿಂದ ರೋಗ ಬರುವುದಕ್ಕೆ ಮುಂಚೆಯೇ ಜಾಗೃತರಾಗಿ ಮಿತ ಹಾಗೂ ಆರೋಗ್ಯ ಪೂರಿತ ಆಹಾರ ಸೇವನೆ, ನಿಗದಿತ ವ್ಯಾಯಾಮ ಮತ್ತು ಆಯಾ ಋತುಗಳಿಗೆ ತಕ್ಕಂತೆ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಹಣ್ಣು, ತರಕಾರಿ, ಸೊಪ್ಪುಗಳನ್ನು ಸೇವಿಸುವುದು ಅವಶ್ಯಕವಾಗಿದೆ. ನಮ್ಮ ಆಯುರ್ವೇದದಲ್ಲಿ ರೋಗವನ್ನು ಗುಣಪಡಿಸುವ ಸಾಮಥ್ರ್ಯವಿದೆ. ಅಡ್ಡ ಪರಿಣಾಮದ ಭಯವಿಲ್ಲದೆ ವೈದ್ಯರ ಸೂಕ್ತ ಸಲಹೆಯಂತೆ ಔಷಧವನ್ನು ಬಳಸಬಹುದು.

ಕೊರೊನಾ ಸಂದರ್ಭದಲ್ಲಿ ಅರಿಶಿನ, ಹಸಿ ಶುಂಠಿ, ಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗ , ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು, ಮೂಸಂಬಿ, ಪರಂಗಿ ಹಣ್ಣು, ಮೂಲಂಗಿ ಸೇರಿದಂತೆ ಹಲವು ಮನೆಯಲ್ಲೇ ನಿತ್ಯ ಬಳಸುವ ವಸ್ತುಗಳನ್ನು ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.
#ಬಿ.ಎಸ್.ರಾಮಚಂದ್ರ

Facebook Comments