ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಪ್ರಧಾನಿ ಮೋದಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.27- ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಬಹುದಾದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದು, ಭಾರತ ಹೊಸ ಹಾಗೂ ಅಸಾಧಾರಣ ಹಂತಕ್ಕೆ ತಲುಪಿದೆ ಎಂದು ವಿಶ್ಲೇಷಿಸಿದ್ದಾರೆ.

ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಎಂದು ಗುರುತಿಸಲಾಗುವ ಈ ಕೋಶ ಆರೋಗ್ಯ ಕ್ಷೇತ್ರದ ಎಲ್ಲ ಭಾಧ್ಯಸ್ಥರನ್ನು ಒಂದೇ ವೇದಿಕೆಗೆ ತರಲಿದೆ. ಮುಂದಿನ ದಿನಗಳಲ್ಲಿ ರೋಗಿಗಳು ಮತ್ತು ವೈದ್ಯರೊಂದಿಗೆ ಸಂಪರ್ಕ ಏರ್ಪಡಿಸಲು, ರೋಗಿಗಳ ಭಾಷೆಯಲ್ಲೇ ಸಮಾಲೋಚನೆ ನಡೆಸುವ ಅನುಕೂಲತೆಯನ್ನು ಈ ವೇದಿಕೆಯಲ್ಲಿ ಕಲ್ಪಿಸಲಾಗುವುದು. ದೇಶದ ಪ್ರತಿಯೊಬ್ಬ ಪ್ರಜೆಗೂ ರಾಷ್ಟ್ರೀಯ ಗುರುತಿನ ಚೀಟಿ ನೀಡಲಾಗುವುದು.

ಆರೋಗ್ಯ ಕ್ಷೇತ್ರದಲ್ಲಿರುವವರ ನೋಂದಣಿ ಮತ್ತು ಆರೋಗ್ಯ ಕ್ಷೇತ್ರಗಳ ಸೌಲಭ್ಯಗಳನ್ನು ದಾಖಲಿಸಲು ಅನುಕೂಲವಾಗಲಿದೆ ಎಂದು ಮೋದಿ ಹೇಳಿದ್ದಾರೆ. ಇದು ಅತ್ಯಂತ ಮಹತ್ವದ ದಿನ. ಉದ್ಘಾಟನೆಗೊಳ್ಳುತ್ತಿರುವ ಅಭಿಯಾನ ದೇಶದಲ್ಲಿನ ಆರೋಗ್ಯ ಕ್ಷೇತ್ರದ ಸೌಲಭ್ಯಗಳನ್ನು ಹೆಚ್ಚಿಸಲಿದೆ. ಕಳೆದ ಏಳು ವರ್ಷದಲ್ಲಿ ಇಂದು ಹೊಸ ಹಂತಕ್ಕೆ ನಾವು ಬದಲಾಗಿದ್ದೇವೆ.

ಇದು ಸಾಮಾನ್ಯ ಹಂತವಲ್ಲ, ಅಸಾಧಾರಣ ಹಂತವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಕಳೆದ ಮೂರು ವರ್ಷಗಳ ಹಿಂದೆ ಆರಂಭಿಸಲಾಯಿತು. ಪಂಡಿತ್ ದೀನ್ ದಯಾಳ್ ಉಪಾದ್ಯಾಯ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಯಾಗಿತ್ತು. ಅದರ ಮುಂದುವರೆದ ಭಾಗವಾಗಿ ಇಂದು ಭಾರತ್ ಡಿಜಿಟಲ್ ಮಿಷನ್ ದೇಶಾದ್ಯಂತ ಕಾರ್ಯಾರಂಭ ಮಾಡುತ್ತಿದೆ ಎಂದರು.

ಕೇಂದ್ರ ಸರ್ಕಾರದ ಆಸಕ್ತಿಯಿಂದ ದೇಶದಲ್ಲಿ ಈವರೆಗೂ 90 ಕೋಟಿ ಮಂದಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದ ತಕ್ಷಣವೇ ಕೋವಿನ್ ಜಾಲತಾಣದಲ್ಲಿ ದೃಢೀಕರಣ ಪತ್ರವನ್ನು ನೀಡಲಾಗುತ್ತಿದೆ. ರಸನ್ ಟು ಪ್ರಶಾಸನ್‍ನಿಂದ ಯುಪಿಐ ಜನ ಸಾಮಾನ್ಯರನ್ನು ತಲುಪಿದೆ. 118 ಮಂದಿ ಮೊಬೈಲ್ ಸಬ್‍ಸ್ಕ್ರಿಪ್ಷನ್‍ಗಳಾಗಿದ್ದು, 80 ಕೋಟಿ ಇಂಟರ್‍ನೆಟ್ ಬಳಕೆದಾರರು ಮತ್ತು 43 ಮಂದಿ ಜನ್‍ದನ್ ಖಾತೆಗಳು ಡಿಜಿಟಲ್ ಪೆಮೆಂಟ್ ವ್ಯವಸ್ಥೆಯನ್ನು ಬಳಕೆ ಮಾಡುತ್ತಿವೆ. ಭಾರತದ ದೊಡ್ಡ ಡಿಜಿಟಲ್ ಸಂಪತ್ತಿನತ್ತ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ.

ಅದೇ ರೀತಿ ಆಯುಷ್ ಭಾರತ್ ಡಿಜಿಟಲ್ ಮಿಷನ್ ಹೊಸದಾಗಿ ಎದುರಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲಿದೆ. ಬಡವರ ಹಾಗೂ ಮಧ್ಯಮ ವರ್ಗದವರಿಗೆ ತಂತ್ರಜ್ಞಾನ ಆಧರಿಸಿ ಉನ್ನತ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿದೆ. ದೇಶಾದ್ಯಂತ ಎಲ್ಲಾ ಆಸ್ಪತ್ರೆಗಳಿಗೂ ಇದನ್ನು ಸಂಪರ್ಕಿಸಲಾಗುವುದು. ಅಲ್ಲಿನ ತಜ್ಞರಿಂದ ರೋಗಿಗಳಿಗೆ ಸಲಹೆ, ಸೂಚನೆ ಹಾಗೂ ಚಿಕಿತ್ಸೆ ದೊರೆಯಲಿದೆ ಎಂದು ಮೋದಿ ಹೇಳಿದರು.

ಕೊರೊನಾ ಹೋರಾಟದಲ್ಲಿ ಅವಿರತ ಶ್ರಮವಹಿಸಿ ದುಡಿದ ವೈದ್ಯರಿಗೆ, ನರ್ಸ್‍ಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಅಭಿನಂದನೆ ಹೇಳಿದ ಮೋದಿ ಅವರು, ಲಸಿಕೆ ಹಾಗೂ ಚಿಕಿತ್ಸೆಯಲ್ಲಿ ಭಾರೀ ಪರಿಣಾಮ ಕಂಡಿದ್ದೇವೆ. ಕೊರೊನಾದಿಂದ ದೇಶಕ್ಕೆ ಮುಕ್ತಿ ಕೊಡಿಸಲು ವೈದ್ಯರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

ಇಂದು ಪ್ರವಾಸೋದ್ಯಮ ದಿನವೂ ಆಗಿದೆ. ಕೋವಿಡ್ ಬಳಿಕ ಪ್ರವಾಸೋದ್ಯಮ ಕ್ಷೀಣಿಸಿದೆ. ಲಸಿಕೀರಣದಲ್ಲಿ ಹೆಚ್ಚು ಸಾಧನೆ ಮಾಡಿದರೆ ಪ್ರವಾಸೋದ್ಯಮವೂ ಸುಧಾರಣೆ ಕಾಣಲಿದೆ. ಹಾಗಾಗಿ ಎಲ್ಲಾ ಭಾಗಗಳು ಲಸಿಕೆ ಪಡೆಯಲಿ ಆದ್ಯತೆ ನೀಡಬೇಕು. ಹಿಮಾಚಲಪ್ರದೇಶ, ಅಂಡಮಾನ್, ನಿಕೋಬಾರ್ ಪ್ರಾಂತ್ಯಗಳು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಮೋದಿ ಆಚ್ಚರಿ ವ್ಯಕ್ತ ಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಕ್ ಮಾಂಡವೀಯ ಅವರು, ಕಳೆದ ವರ್ಷ ಆಗಸ್ಟ್ 15ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಭಾಷಣ ಮಾಡುವಾಗ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಘೋಷಣೆ ಮಾಡಿದ್ದರು. ಅದು ಇಂದು ಉದ್ಘಾಟನೆಗೊಂಡಿರುವುದು ಸಂತಸ ತಂದಿದೆ. ಇದು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ಹೇಳಿದ್ದಾರೆ.

Facebook Comments