ಈ ವರೆಗೆ ಆಯುಷ್ಮಾನ್ ಭಾರತ ಯೋಜನೆಯಡಿ 50 ಲಕ್ಷ ಫಲಾನುಭವಿಗಳಿಗೆ ಉಚಿತ ಚಿಕಿತ್ಸೆ : ಮೋದಿ
ನವದೆಹಲಿ, ಅ.15-ದೇಶದ ಜನರ ಆರೋಗ್ಯ ರಕ್ಷಣೆ ಮತ್ತು ಹೆಲ್ತಿ ಇಂಡಿಯಾದತ್ತ ಆಯುಷ್ಮಾನ್ ಭಾರತ್ ಒಂದು ಪ್ರಮುಖ ಮೈಲಿಗಲ್ಲು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಯ ಪ್ರಗತಿ ಮೇಲೆ ಬೆಳಕು ಚೆಲ್ಲಿಸಿರುವ ಪ್ರಧಾನಿ, ಈ ಕಾರ್ಯಕ್ರಮದ ಅಡಿ ಈವರೆಗೆ 50 ಲಕ್ಷ ಫಲಾನುಭವಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಮೋದಿ, ಆಯುಷ್ಮಾನ್ ಭಾರತ ಯೋಜನೆ ಬಗ್ಗೆ ಭಾರತೀಯರು ಹೆಮ್ಮೆ ಪಡುವಂತಾಗಿದೆ. ಇದು ಸಹಸ್ರಾರು ಜನರ ಆಯೋಗ್ಯವನ್ನು ಸಬಲೀಕರಣಗೊಳಿಸಿದೆ. ಒಂದೇ ವರ್ಷದ ಅವಧಿಯಲ್ಲಿ 50 ಲಕ್ಷ ನಾಗರಿಕರು ಉಚಿತ ವೆಚ್ಚದಲ್ಲಿ ಈ ಮಹತ್ವದ ಯೋಜನೆಯ ಫಲಾನುಭವ ಪಡೆದಿದ್ದಾರೆ ಎಂದು ವಿವರಿಸಿದ್ದಾರೆ.
ದೇಶದ ಜನರಿಗೆ ಆರೋಗ್ಯ ರಕ್ಷಣೆ ಒದಗಿಸಿ, ಅವರ ಸ್ವಾಸ್ಥ್ಯ ಸಮಸ್ಯೆಗಳನ್ನು ನಿವಾರಿಸುವ ಜೊತೆ ಜೊತೆಗೆ ಹಲವಾರು ಭಾರತೀಯರನ್ನು ಆಯುಷ್ಮಾನ್ ಭಾರತ್ ಸಬಲೀಕರಣಗೊಳಿಸಿದೆ ಎಂದು ಮೋದಿ ಹೇಳಿದ್ದಾರೆ.
ಆರೋಗ್ಯ ವಿಮೆ ಮೂಲಕ ಬಡ 10 ಕೋಟಿ ಬಡ ಮತ್ತು ಕೆಳ ಮಾಧ್ಯಮ ವರ್ಗದ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ ಒದಗಿಸುವ ಉದ್ದೇಶದಿಂದ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ಈ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ ತಲಾ ಐದು ಲಕ್ಷ ರೂ.ಗಳ ಆರೋಗ್ಯ ವಿಮಾ ಸೌಲಭ್ಯ ನೀಡಲಾಗುತ್ತಿದೆ.