ಮಾಜಿ ಉಪಕುಲಪತಿ ಅಯ್ಯಪ್ಪ ಕೊಲೆಗೆ 1 ಕೋಟಿ ರೂ. ಸುಪಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.17- ಅಲಯನ್ಸ್ ವಿಶ್ವವಿದ್ಯಾಲಯದ ಮಾಲೀಕತ್ವ ವಿಚಾರದಲ್ಲಿ ಮಾಜಿ ಉಪಕುಲಪತಿ ಡಾ.ಅಯ್ಯಪ್ಪ ದೊರೆ ಅವರನ್ನು ಒಂದು ಕೋಟಿಗೂ ಹೆಚ್ಚು ಸುಪಾರಿ ಹಣ ಪಡೆದು ಕೊಲೆ ಮಾಡಿರುವ ಆಘಾತಕಾರಿ ವಿಷಯ ಬಹಿರಂಗವಾಗಿದೆ.  ಕೊಲೆ ಆರೋಪಿಗಳ ಪೈಕಿ ಸುಪಾರಿ ನೀಡಿದ್ದ ಬಿಟಿಎಂ ಲೇಔಟ್‍ನ ಸುಧೀರ್ ಅಂಗೂರ್ (57) ಹಾಗೂ ಮತ್ತೊಬ್ಬ ಆರೋಪಿ ಜೆಸಿ ನಗರದ ಸೂರಜ್‍ಸಿಂಗ್ (29) ಎಂಬುವವರನ್ನು ಆರ್‍ಟಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಾ.ಅಯ್ಯಪ್ಪ ದೊರೆ ಮೂಲತಃ ವಿಜಯಪುರ ಜಿಲ್ಲೆಯ ಸಾಸೂರಿನವರಾಗಿದ್ದು, ಅನೇಕಲ್ ಬಳಿಯಿರುವ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ 2010-2013ರ ವರೆಗೆ ಸಂಸ್ಥಾಪಕ ಉಪ ಕುಲಪತಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು. 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜನಸಾಮಾನ್ಯರ ಪಕ್ಷ ಸ್ಥಾಪಿಸಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಶಾಸಕರ ಸ್ಥಾನಕ್ಕೆ ಸ್ಪರ್ಧಿಸಿದ್ದರು.

2016ರಿಂದ ಸುಧೀರ್ ಅಂಗೂರ್ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಸುಧೀರ್ ಅಂಗೂರ್‍ಗೆ ಮಾಲೀಕತ್ವದ ವಿಚಾರವಾಗಿ ಕಾನೂನಾತ್ಮಕ ಹೋರಾಟದಲ್ಲಿ ಹಿನ್ನಡೆಯಾಗಿತ್ತು. ಅಲಯನ್ಸ್ ವಿಶ್ವವಿದ್ಯಾನಿಲಯದಲ್ಲಿ ಮಧುಕರ್ ಅಂಗೂರ್ ಹಾಗೂ ಸುಧೀರ್ ಅಂಗೂರ್ ಸಹೋದರರ ನಡುವೆ ಮಾಲೀಕತ್ವ ಮತ್ತು ಸ್ವಾಧೀನಾನುಭವಕ್ಕಾಗಿ ವ್ಯಾಜ್ಯ ನಡೆಯುತ್ತಿತ್ತು. ಈ ವಿಚಾರವಾಗಿ ವಿವಿಧ ನ್ಯಾಯಾಲಯದಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇದೆಲ್ಲದರ ನಡುವೆ ಅಲಯನ್ಸ್ ವಿಶ್ವವಿದ್ಯಾನಿಲಯದ ಪ್ರಸಕ್ತ ಸಾಲಿನ ಘಟಿಕೋತ್ಸವ ಸಮಾವೇಶ ನವೆಂಬರ್ 3ರಂದು ಇರುವುದಾಗಿ ತಿಳಿದ ಮಧುಕರ್ ಅಂಗೂರ್ ಹಾಗೂ ಇವರ ವಕೀಲರು ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪ್ರಸಕ್ತ ಸಾಲಿನ ಘಟಿಕೋತ್ಸವವನ್ನು ರದ್ದು ಮಾಡಲು ಕೋರಿದ್ದರು. ಮಧುಕರ್ ಅಂಗೂರ್ ಮತ್ತು ಡಾ.ಅಯ್ಯಪ್ಪ ದೊರೆ ಅವರ ಕಾನೂನಾತ್ಮಕ ಹೋರಾಟ ವಿವಿ ಮಾಲೀಕತ್ವ ಹಿನ್ನೆಡೆಗೆ ಕಾರಣವಾಗಿದೆ ಎಂದು ಸುಧೀರ್ ಇವರಿಬ್ಬರ ವಿರುದ್ಧ ಅಸಮಾಧಾನ ಗೊಂಡಿದ್ದನು.

ಕಳೆದ ಒಂದೂವರೆ ತಿಂಗಳ ಹಿಂದೆ ಸುಧೀರ್ ಅಂಗೂರ್, ತಮ್ಮಲ್ಲೇ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಹೋದ್ಯೋಗಿ ಸೂರಜ್ ಸಿಂಗ್‍ನನ್ನು ಬಿಟಿಎಂ ಲೇಔಟ್ ಕಚೇರಿಗೆ ಕರೆಸಿಕೊಂಡು ಅಲಯನ್ಸ್ ವಿಶ್ವವಿದ್ಯಾನಿಲಯ ತಮ್ಮ ಕೈಯಲ್ಲಿ ಉಳಿಯಬೇಕಾದರೆ ಡಾ.ಅಯ್ಯಪ್ಪ ದೊರೆ ಮತ್ತು ಮಧುಕರ್ ಅಂಗೂರ್ ಅವರನ್ನು ಕೊನೆಗಾಣಿಸಬೇಕು ಎಂದು ಮಾತುಕತೆ ನಡೆಸಿದ್ದನು.

ಡಾ.ಅಯ್ಯಪ್ಪ ದೊರೆ ಅವರನ್ನು ಕಳೆದ ನಾಲ್ಕೈದು ತಿಂಗಳುಗಳಿಂದ ಹಿಂಬಾಲಿಸಿ ಅವರ ಚಲನ-ವಲನಗಳನ್ನು ಗಮನಿಸಿ ಎಷ್ಟು ಹೊತ್ತಿಗೆ ಹೊರಗೆ ಹೋಗುತ್ತಾರೆ, ರಾತ್ರಿ ಎಷ್ಟು ಗಂಟೆಗೆ ವಾಕಿಂಗ್‍ಗೆ ತೆರಳುತ್ತಾರೆ ಎಂದು ತಿಳಿದುಕೊಂಡಿದ್ದನು.  ನೀನು ಎಷ್ಟು ಮಂದಿಯನ್ನು ಕರೆತರುತ್ತೀಯೋ ಅಷ್ಟು ಮಂದಿಗೆ ತಲಾ 20 ಲಕ್ಷ ರೂ.ನಂತೆ ಒಂದರಿಂದ ಎರಡು ಕೋಟಿ ಹಣ ನೀಡುವುದಾಗಿ ಸೂರಜ್‍ಗೆ ತಿಳಿಸಿದ್ದನು.

ಅದರಂತೆ ಅಯ್ಯಪ್ಪ ದೊರೆ ಅವರನ್ನು ಕೊಲೆ ಮಾಡಲು ಸೂರಜ್ ತನ್ನ ಐದಾರು ಮಂದಿ ಸ್ನೇಹಿತರೊಂದಿಗೆ ಸೇರಿ ಸಂಚು ರೂಪಿಸಿ ಸಮಯಕ್ಕಾಗಿ ಕಾಯುತ್ತಿದ್ದರು.
ಅ.15ರಂದು ರಾತ್ರಿ ಸುಮಾರು 10.45ರ ಸಮಯದಲ್ಲಿ ಡಾ.ಅಯ್ಯಪ್ಪ ದೊರೆ ಅವರು ಊಟ ಮಾಡಿ ವಾಯುವಿಹಾರಕ್ಕೆ ಆರ್‍ಟಿ ನಗರದ ಹೆಚ್‍ಎಂಟಿ ಮೈದಾನಕ್ಕೆ ಹೋಗಿದ್ದಾಗ ಸಂಚಿನಂತೆ ಗುಂಪೊಂದು ಏಕಾಏಕಿ ಇವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿತ್ತು.

ವಾಯುವಿಹಾರಕ್ಕೆ ಹೋಗಿದ್ದವರು ತಡರಾತ್ರಿಯಾದರೂ ಮನೆಗೆ ವಾಪಸಾಗದಿದ್ದನ್ನು ಕಂಡು ಗಾಬರಿಯಾದ ಅಯ್ಯಪ್ಪ ಅವರ ಪತ್ನಿ ಪಾವನಾ ದಿಬ್ಬೂರು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಎಚ್‍ಎಂಟಿ ಮೈದಾನದಲ್ಲಿ ನಿನ್ನೆ ಬೆಳಗ್ಗೆ 5.15ರ ಸುಮಾರಿನಲ್ಲಿ ಇವರು ರಕ್ತದ ಮಡುವಿನಲ್ಲಿ ಬಿದ್ದಿರುವುದುನ್ನು ಕುಟುಂಬಸ್ಥರು ಗಮನಿಸಿದ್ದರು. ತಕ್ಷಣ ಅಯ್ಯಪ್ಪ ಅವರ ಪತ್ನಿ ಪಾವನಾ ದಿಬ್ಬೂರು ಅವರು ಆರ್‍ಟಿ ನಗರ ಠಾಣೆಯ ಹೊಯ್ಸಳ ವಾಹನದವರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ವಿಧಿ-ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೆÇಲೀಸ್ ಆಯುಕ್ತರು, ಅಪರ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು, ಹಿರಿಯ ಅಧಿಕಾರಿಗಳು, ಸಿಸಿಬಿ ಘಟಕದ ಆಧಿಕಾರಿಗಳ ನ್ನೊಳಗೊಂಡಂತೆ ಎಂಟು ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.

ಈ ತಂಡ ಕಾರ್ಯಾಚರಣೆ ನಡೆಸಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ವಿಶೇಷ ತನಿಖಾ ತಂಡ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

ದೊರೆ ಅವರ ಪತ್ನಿ ಪಾವನಾ ದಿಬ್ಬೂರು ಅವರು ಹೇಳುವಂತೆ ಸುಧೀರ್ ಅಂಗೂರ್ ಹಣಕಾಸಿನ ವ್ಯವಹಾರದಲ್ಲಿ ಪತಿಗೆ ಸಾಕಷ್ಟು ಹಣ ನೀಡಬೇಕಾಗಿತ್ತೆಂದು ತಿಳಿಸಿದ್ದಾರೆ.
ಆರ್‍ಟಿ ನಗರದ ಹೆಚ್‍ಎಂಟಿ ಮೈದಾನ ಬೆಂಗಳೂರು ನಗರ ಕೇಂದ್ರ ಭಾಗದಲ್ಲಿದ್ದು, ಈ ಕೊಲೆ ಪ್ರಕರಣ ಸಾರ್ವಜನಿಕರಲಿ ್ಲ ತೀವ್ರ ಆತಂಕವನ್ನುಂಟು ಮಾಡಿದ್ದು, ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತ್ವರಿತ ಕ್ರಮವನ್ನು ಪ್ರಶಂಸಿಸಲಾಗಿದೆ.

ತಪ್ಪಿದ ಮತ್ತೊಂದು ಹತ್ಯೆ:
ಆರೋಪಿಗಳ ಬಂಧನದಿಂದ ಮಧುಕರ್ ಅಂಗೂರ್ ಅವರ ಹತ್ಯೆ ತಪ್ಪಿದಂತಾಗಿದ್ದು, ಪೆÇಲೀಸರು ಇವರಿಗೆ ಸೂಕ್ತ ಭದ್ರತೆ ಒದಗಿಸಿದ್ದಾರೆ.

Facebook Comments