ಕೊರೊನಾ ಔಷಧಿ ಘೋಷಣೆ : ಬಾಬಾ ರಾಮ್ ದೇವ್ ಸೇರಿ 6 ಜನರ ವಿರುದ್ಧ ಎಫ್‍ಐಆರ್..!

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ (ರಾಜಸ್ತಾನ), ಜೂ.27- ಕಿಲ್ಲರ್ ಕೊರೊನಾ ವೈರಸ್ ನಿಗ್ರಹಕ್ಕಾಗಿ ಔಷಧಿ ಅಭಿವೃದ್ಧಿಗೊಳಿಸಿರುವುದಾಗಿ ಘೋಷಿಸಿದ್ದ ಯೋಗ ಗುರು ಬಾಬಾ ರಾಮ್‍ದೇವ್ ಮತ್ತು ಇತರ ಐವರ ವಿರುದ್ಧ ಜೈಪುರದಲ್ಲಿ ಎಫ್‍ಐಆರ್ ದಾಖಲಾಗಿದೆ.

ರಾಮ್ ದೇವ್ ಅವರಲ್ಲದೆ, ಪತಂಜಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ, ವಿಜ್ಞಾನಿ ಆನುರಾಗ್ ವರ್ಷಣೆ, ನಿಮ್ಸ್ ಅಧ್ಯಕ್ಷ ಬಲಬೀರ್ ಸಿಂಗ್ ತೋಮರ್ ಹಾಗೂ ನಿರ್ದೇಶಕ ಅನುರಾತ್ ತೋಮರ್ ಅವರ ವಿರುದ್ಧ ಜೈಪುರದ ಜ್ಯೋತಿನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಸಾಮಾನ್ಯ ಸೋಂಕು ನಿಯಂತ್ರಣದ ಔಷಧಿಯನ್ನು ಕೊರೊನಾ ನಿಗ್ರಹದ ಹೆಸರಿನಲ್ಲಿ ಪ್ರಚಾರ ಮಾಡಿ ಜನರನ್ನು ತಪ್ಪು ದಾರಿಗೆ ಎಳೆದಿದ್ದಾರೆ ಎಂಬ ಆರೋಪದ ಮೇಲೆ ಈ ಆರು ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಪತಂಜಲಿ ಅಯುರ್ವೇದ ಸಂಸ್ಥೆ ಕೊರೊನಿಲ್ ಔಷಧಿಯನ್ನು ಅಭಿವೃದ್ಧಿಗೊಳಿಸಿರುವುದಾಗಿ ಮಂಗಳವಾರವಷ್ಟೇ ಘೋಷಿಸಿತ್ತು.

ಕೊರೊನಾ ವೈರಸ್‍ಗೆ ಪರಿಣಾಮಕಾರಿಯಲ್ಲದ ಸಾಮಾನ್ಯ ಸೋಂಕು ನಿಗ್ರಹ ಔಷಧಿಯನ್ನು ಕೊರೊನಿಲ್ ಸೋಗಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಜನರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ ಎಂದು ಗುರು ರಾಮದೇವ್ ಮತ್ತು ಸಂಸ್ಥೆಯ ಉನ್ನತಾಧಿಕಾರಿಗಳು ಹಾಗೂ ವಿಜ್ಞಾನಿಗಳ ವಿರುದ್ಧ ಬಲರಾಂ ಜಾಖಡ್ ಎಂಬುವರು ದೂರು ನೀಡಿದ್ದರು.

ಕೊರೊನಾ ಸೋಂಕು ರೋಗ ಗುಣಪಡಿಸಲು ತಮ್ಮ ಸಂಸ್ಥೆಯ ಔಷಧಿ ಅತ್ಯಂತ ಪರಿಣಾಮಕಾರಿ ಎಂದು ಹೇಳಿಕೊಂಡು ಸಾಮಾನ್ಯ ಸೋಂಕು ಔಷಧಿಯನ್ನು ಆ ಹೆಸರಿನಲ್ಲಿ ಅಪಪ್ರಚಾರ ಮಾಡುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆದ ಆರೋಪಕ್ಕಾಗಿ ರಾಮದೇವ್ ಮತ್ತು ಇತರ ಐವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಜ್ಯೋತಿನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸುಧೀರ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.

Facebook Comments