ಬಾಬ್ರಿ ಮಸೀದಿ ಧ್ವಂಸಕ್ಕೆ 27 ವರ್ಷ : ಅಯೋಧ್ಯೆಯಲ್ಲಿ ಬಿಗಿಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

ಅಯೋಧ್ಯೆ,ಡಿ.6- ಇಂದಿಗೆ ಬಾಬ್ರಿ ಮಸೀದಿ ಧ್ವಂಸ ಘಟನೆಗೆ 27ನೇ ವರ್ಷ. ಈ ಹಿನ್ನಲೆಯಲ್ಲಿ ಅಯೋಧ್ಯೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.  ಕಳೆದ ತಿಂಗಳು ಅಯೋಧ್ಯೆ ವಿವಾದಕ್ಕೆ ತೆರೆ ಎಳೆದು ಸುಪ್ರೀಂಕೋರ್ಟ್ ನೀಡಿದ ತೀರ್ಪು ಹಾಗೂ ಇಂದಿಗೆ ದ್ವಂಸ ಪ್ರಕರಣಕ್ಕೆ 27 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಇಂದು ಅಯೋಧ್ಯೆ ಸೇರಿದಂತೆ ಉತ್ತರಪ್ರದೇಶಾದ್ಯಂತ ಭದ್ರತಾ ಕ್ರಮ ಕೈಗೊಳ್ಳಲಾಗಿದೆ.

ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆ (ಪಿಎಸಿ) 25 ತುಕಡಿಯನ್ನು ಈಗಾಗಲೇ ಅಯೋಧ್ಯೆಯಲ್ಲಿ ನಿಯೋಜಿಸಲಾಗಿದ್ದು, 14ಕ್ಕೂ ಹೆಚ್ಚು ಬೆಟಾಲಿಯನ್ ಭದ್ರತೆ ಕಾರ್ಯದಲ್ಲಿ ತೊಡಗಿವೆ.  400 ಕಾನ್‍ಸ್ಟೇಬಲ್, 1,500 ಹೋಮ್‍ಗಾರ್ಡ್‍ಗಳು, ಎಟಿಎಸ್, ಎಲ್‍ಐಯು ಮತ್ತು ಅಗ್ನಿಶಾಮಕ ದಳ ಬೀಡುಬಿಟ್ಟಿದೆ.

ಸಿಸಿಟಿವಿ ಮತ್ತು ದ್ರೋಣ್ ಕ್ಯಾಮೆರಾಗಳನ್ನು ಕೂಡ ಬಳಸಲಾಗಿದ್ದು, ಕೋಮುಸಾಮರಸ್ಯ ಕದಡುವಂತಹ ಚಟುವಟಿಕೆಗಳ ಮೇಲೆ ನಿಗಾವಹಿಸಿದ್ದು, ಸಾಮಾಜಿಕ ಜಾಲತಾಣಗಳ ಮೇಲೂ ನಾವು ಹದ್ದಿನಕಣ್ಣಿಡಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಶಿಶ್‍ಕುಮಾರ್ ತಿವಾರಿ ತಿಳಿಸಿದ್ದಾರೆ.

27 ವರ್ಷಗಳ ಹಿಂದೆ ಅಂದರೆ ಡಿ.6, 1992ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಯೋಜಿತವಾಗಿದ್ದ ಬೃಹತ್ ರ್ಯಾಲಿ ವೇಳೆ ವಿಎಚ್‍ಪಿ ಮತ್ತು ಬಿಜೆಪಿಯ ಕರಸೇವಕರು 16ನೇ ಶತಮಾನದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಆನಂತರ ದೇಶದ ವಿವಿಧೆಡೆ ಭುಗಿಲೆದ್ದ ಗಲಭೆಯಲ್ಲಿ 2000ಕ್ಕೂ ಹೆಚ್ಚು ಮಂದಿ ಹತರಾಗಿ ಅನೇಕರು ಗಾಯಗೊಂಡಿದ್ದರು.

Facebook Comments