‘ಲಿಂಗಾಯತರು ಬಿಜೆಪಿಗೆ ವೋಟ್ ಹಾಕಿಲ್ಲ, ಹಣ ಪಡೆದು ಕಾಂಗ್ರೆಸ್‌ಗೆ ಬುಕ್ ಆಗಿದ್ದಾರೆ’ 

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರ್ಗಿ,ಮೇ 27- ಚಿಂಚೋಳಿ ಉಪ ಚುನಾವಣೆಯಲ್ಲಿ ಲಿಂಗಾಯತರು ಬಿಜೆಪಿಗೆ ಮತ ಹಾಕಿಲ್ಲ. ಕಾಂಗ್ರೆಸ್‍ನಿಂದ ಹಣ ಪಡೆದು ಬುಕ್ ಆಗಿದ್ದರು. ಬಂಜಾರ ಮತ್ತು ಕೋಲಿ ಸಮಾಜವದರೇ ಬಿಜೆಪಿಗೆ ಓಟ್ ಹಾಕಿರೋದು ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಲಿಂಗಾಯತರು ಬೆಂಬಲ ನೀಡಿದ್ದರೆ ಲೀಡ್ ಇನ್ನೂ ಜಾಸ್ತಿಯಾಗ್ತಿತ್ತು. ದುಡ್ಡು ಕೊಡಲಿ ಬಿಡಲಿ ಕೋಲಿ ಸಮಾಜದವರು ಬಿಜೆಪಿಗೆ ಓಟ್ ಹಾಕಿದ್ದಾರೆ. ಆದರೆ ಲಿಂಗಾಯತರು ಮಾತ್ರ ಬಿಜೆಪಿಗೆ ಕೈ ಕೊಟ್ಟಿದ್ದಾರೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿರುವ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿಂಚೋಳಿ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಬಂಜಾರ ಸಮುದಾಯ ಮತ್ತು ಕೋಲಿ ಸಮುದಾಯ ನಿರ್ಣಾಯಕ ಪಾತ್ರ ವಹಿಸಿತ್ತು. ಅದೇ ರೀತಿ ಲಿಂಗಾಯತ ಮತಗಳು ಕೂಡ ಹೆಚ್ಚಾಗಿದ್ದವು. ಲಿಂಗಾಯತ ಮತಗಳು ಬಿಜೆಪಿಗೆ ಬಂದೇಬರುತ್ತವೆ ಎಂದು ನಂಬಿಕೊಳ್ಳಲಾಗಿತ್ತು.

ಆದರೆ ಅವಿನಾಶ್ ಜಾಧವ್ ಕೇವಲ 8 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎಲ್ಲರೂ ಅವರಿಗೆ ಮತ ಹಾಕಿದ್ದರೆ ಅವರ ಗೆಲುವಿನ ಅಂತರ ಹೆಚ್ಚಾಗಬೇಕಿತ್ತು ಎಂಬುದು ಚಿಂಚನಸೂರ್ ಅವರ ಲೆಕ್ಕಾಚಾರ ಇರಬೇಕು.

ಇದಕ್ಕಾಗಿಯೇ ಅವರು ತಮ್ಮ ಆಪ್ತರ ಬಳಿ ಲಿಂಗಾಯತರು ಅವಿನಾಶ್ ಜಾಧವ್ ಅವರನ್ನು ಬೆಂಬಲಿಸಿಲ್ಲ ಎಂದು ಹೇಳಿರಬಹುದು. ಚುನಾವಣೆ ಮುಗಿದಿದೆ. ಗೆದ್ದಾಗಿದೆ. ಈಗ ಏಕೆ ಈ ಹೇಳಿಕೆ ನೀಡಿದ್ದಾರೆ ಎಂದು ಹಲವರು ಮಾತನಾಡುತ್ತಿದ್ದಾರೆ.

ಕಲಬುರಗಿಯಲ್ಲಿ ಖರ್ಗೆಯವರನ್ನು ಸೋಲಿಸಿ ಉಮೇಶ್ ಜಾಧವ್ ಜಯಭೈೀರಿ ಬಾರಿಸಿದ್ದರು. ಇದೇ ಬಾಬುರಾವ್ ಚಿಂಚನಸೂರ್ ಪ್ರಚಾರ ಸಂದರ್ಭದಲ್ಲಿ ಖರ್ಗೆ ವಿರುದ್ಧ ವೇದಿಕೆಯಲ್ಲಿ ತೊಡೆ ತಟ್ಟಿದ್ದರು. ಈಗ ವಿವಾದಾತ್ಮಕ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಕೇಳಿ ಬಂದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin