ರಾಹುಲ್ ಜತೆ ನಾಯ್ಡು 2ನೇ ಸುತ್ತಿನ ಚರ್ಚೆ, ಸರ್ಕಾರ ರಚಿಸಲು ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 19-ಲೋಕಸಭೆ ಚುನಾವಣೆ ಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಿ ಸರ್ಕಾರ ರಚಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ಅವರು ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ಮುಖಂಡರೊಂದಿಗೆ ಎರಡನೆ ಸುತ್ತಿನ ಮಾತುಕತೆ ನಡೆಸಿದರು.

ರಾಹುಲ್ ಗಾಂಧಿ, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ,ಎಲ್‍ಜೆಪಿ ನಾಯಕ ಶರದ್ ಯಾದವ್ ಮತ್ತು ಎಡ ಪಕ್ಷಗಳ ನಾಯಕರೊಂದಿಗೆ ಅವರು ಇಂದು ಕೂಡ ಸುದೀರ್ಘ ಮಾತುಕತೆ ನಡೆಸಿ ಸರ್ಕಾರ ರಚನೆ ಲೆಕ್ಕಾಚಾರ ಕಸರತ್ತು ಮುಂದುವರೆಸಿದರು.

ಶುಕ್ರವಾರದಿಂದ ಸಕ್ರಿಯವಾಗಿರುವ ಚಂದ್ರಬಾಬು ನಾಯ್ಡು ಅವರು ಈಗಾಗಲೇ ರಾಹುಲ್, ಶರದ್‍ಪವಾರ್, ಶರದ್‍ಯಾದವ್, ಸಿಪಿಎಂ ನಾಯಕ ಸೀತಾರಾಮ್ ಯಚೂರಿ, ಅಮ್‍ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರ ಜತೆ ಮಾತುಕತೆ ನಡೆಸಿದ್ದಾರೆ.

ನಿನ್ನೆ ಬೆಳಗ್ಗೆ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದರು.ಉತ್ತರ ಪ್ರದೇಶಕ್ಕೆ ತೆರಳಲಿರುವ ಚಂದ್ರಬಾಬು ನಾಯ್ಡು, ಬಿಎಸ್‍ಪಿ ನಾಯಕಿ ಮಾಯಾವತಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರನ್ನು ನಿನ್ನೆ ಸಂಜೆ ಭೇಟಿಮಾಡಿ ಚರ್ಚಿಸಿದ್ದರು.

ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜತೆ ಈಗಾಗಲೇ ದೂರವಾಣಿ ಮುಖಾಂತರ ಮಾತುಕತೆ ಮುಗಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಒಂದು ವೇಳೆ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗದೆ ಬಿಜೆಪಿ ಅತಂತ್ರ ಸ್ಥಿತಿಗೆ ತಲುಪಿದರೆ ಆ ಅವಕಾಶವನ್ನು ಬಳಸಿಕೊಂಡು ಕೇಸರಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಚಂದ್ರಬಾಬು ನಾಯ್ಡು ಬಿಜೆಪಿಯ ವಿರುದ್ಧ ಶಕ್ತಿಗಳನ್ನು ಒಗ್ಗೂಡಿಸುತ್ತಿದ್ದಾರೆ.

ಕರ್ನಾಟಕದ ವಿಧಾನಸಭೆ ಚುನಾವಣೆ 2018ರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಬಿಜೆಪಿಗೆ ಒಂದು ಕ್ಷಣವೂ ಅವಕಾಶ ಕೊಡದಂತೆ ಕಾರ್ಯಾಚರಣೆಗಿಳಿದ ಕಾಂಗ್ರೆಸ್ ನಾಯಕರು, ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಇದೇ ಮಾದರಿಯನ್ನು ಕೇಂದ್ರದಲ್ಲೂ ಅನುಸರಿಸುವ ತಯಾರಿ ನಡೆದಿದೆ.

ಪ್ರಧಾನಿ ಹುದ್ದೆಯ ರೇಸಿನಲ್ಲಿರುವ ಚಂದ್ರಬಾಬು ನಾಯ್ಡು ಅವರು ಬಿಜೆಪಿ ವಿರುದ್ಧ ಶಕ್ತಿಗಳನ್ನು ಒಂದೇ ವೇದಿಕೆಗೆ ತಂದು ಚುನಾವಣಾ ನಂತರದ ಮೈತ್ರಿ ಕೂಟ ರಚಿಸಲು ಮುಂದಾಗಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin