ಸೂರಿಯ `ಬ್ಯಾಡ್‍ಮ್ಯಾನರ್ಸ್’ನಲ್ಲಿ ಅಭಿಷೇಕ್

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ಗೆ ಅಮರ್ ಚಿತ್ರದ ಮೂಲಕ ಎಂಟ್ರಿ ಪಡೆದಂತಹ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್‍ಗೆ ನಿರೀಕ್ಷಿಸಿದ ಯಶಸ್ಸು ಆ ಚಿತ್ರದಲ್ಲಿ ಸಿಗಲಿಲ್ಲ.ತದನಂತರ ಉತ್ತಮ ಕಥೆಗಾಗಿ ಕಾಯುತ್ತಿದ್ದ ಅಭಿಗೆ ಈಗ ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸುವ ಅವಕಾಶ ದೊರೆತಿದೆ. ಚಿತ್ರದ ಟೈಟಲ್ ತುಂಬಾ ವಿಭಿನ್ನವಾಗಿದ್ದು, ಬ್ಯಾಡ್ ಮ್ಯಾನರ್ಸ್ ಎಂಬ ಪದವೇ ಬಹಳಷ್ಟು ರೋಚಕತೆಯನ್ನು ಮೂಡಿಸುತ್ತದೆ.

ಸುಧೀರ್.ಕೆ.ಎಂ. ನಿರ್ಮಾಣದ ಈ ಚಿತ್ರದ ಫಸ್ಟ್‍ಲುಕ್ ಹೊರ ಬರುತ್ತಿದೆ. ಅದು ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬದ ದಿನದಂದೇ ಹೊರ ಬರುತ್ತಿರುವುದು ವಿಶೇಷ. ಅಭಿಷೇಕ್ ಕನ್ನಡ ಚಿತ್ರರಂಗದಲ್ಲಿ ಉತ್ತಮವಾಗಿ ಬೆಳೆಯಬೇಕು ಎನ್ನುವುದು ಅಂಬರೀಶ್ ಅವರ ಮಹದಾಸೆಯಾಗಿತ್ತು.

ಹೀಗಾಗಿಯೇ ಅಮರ್ ಸಿನಿಮಾಕ್ಕೆ ಸ್ವತಃ ಅಂಬರೀಶ್ ಅವರೇ ಮುಂದೆ ನಿಂತು ಮಹೂರ್ತ ಮಾಡಿಸಿ, ತಮ್ಮ ಪುತ್ರನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆದರೆ ಆ ಚಿತ್ರ ರಿಲೀಸಾಗುವಷ್ಟರಲ್ಲಿ ಅಂಬರೀಶ್ ಇಹಲೋಕ ತ್ಯಜಿಸಿದ್ದರು. ನಂತರ ಚಿತ್ರ ಬಿಡುಗಡೆಯಾದರೂ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಹೀಗಾಗಿ ಅಭಿಷೇಕ್ ಒಂದು ಗೆಲುವಿಗಾಗಿ ಕಾಯುತ್ತಿದ್ದಾರೆ.

ರಾ ಸ್ಟೈಲ್ ಸಿನಿಮಾಗಳನ್ನು ಡೈರೆಕ್ಟ್ ಮಾಡುವ ಮೂಲಕವೇ ಸುಕ್ಕಾ ಸೂರಿ, ದುನಿಯಾ ಸೂರಿ ಎಂದೇ ಪ್ರಸಿದ್ಧಿ ಪಡೆದಿರುವ ನಿರ್ದೇಶಕ ಸೂರಿ, ಈಗ ಅಭಿಷೇಕ್ ಅವರನ್ನು ಹಾಕಿಕೊಂಡು ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ಒಂದು ಹಂತದ ಮಾತುಕತೆ ಕೂಡ ಮುಗಿದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಸೂರಿ ಸ್ಕ್ರಿಪ್ಟ್ ರಚನೆಯಲ್ಲಿ ತೊಡಗಿದ್ದಾರಂತೆ. ಲಾಕ್‍ಡೌನ್ ಮುಗಿಯುತ್ತಿದ್ದಂತೆಯೇ ಆ ಚಿತ್ರದ ಕೆಲಸಗಳು ಪ್ರಾರಂಭವಾಗಲಿವೆ ಎಂದು ಹೇಳಲಾಗುತ್ತಿದೆ.

ಇನ್ನು ಅಭಿಷೇಕ್ ಕೂಡ ಈ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ಅಲ್ಲದೆ ಸೂರಿ ಅವರ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಈಗಾಗಲೇ ದುನಿಯಾ ಸೂರಿ ಅವರು ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದು, ಕೇವಲ ಸ್ಟಾರ್ ನಟರು ಮಾತ್ರವಲ್ಲದೆ ಹೊಸಬರ ಸಿನಿಮಾಗಳಿಗೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ಹೊಸಬರನ್ನೂ ಬೆಳೆಸಿದ್ದಾರೆ. ಇದಕ್ಕೆ ಉದಾಹರಣೆ ದುನಿಯಾ, ಕೆಂಡಸಂಪಿಗೆ ಚಿತ್ರಗಳು.

ವಿಜಯ್ ಕೂಡ ದುನಿಯಾ ಚಿತ್ರದಿಂದಲೇ ಸ್ಟಾರ್ ಆದರು. ಸೂರಿ ದುನಿಯಾ ವಿಜಯ್‍ಗೆ ಬಿಗ್ ಬ್ರೇಕ್ ನೀಡಿದರು. ಅಲ್ಲದೆ ಕೆಂಡಸಂಪಿಗೆ ಚಿತ್ರದ ಮೂಲಕ ಸಹ ಇಬ್ಬರು ಹೊಸ ನಟರನ್ನು ಬೆಳಕಿಗೆ ತಂದರು. ಇದೀಗ ಅಭಿಷೇಕ್ ಜೊತೆ ಒಂದಾಗುತ್ತಿದ್ದು, ಇವರಿಬ್ಬರ ಕಾಂಬಿನೇಷನ್ ಚಿತ್ರ ಹೇಗೆ ತಯಾರಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಎಲ್ಲವೂ ಮಾತುಕತೆ ಹಂತದಲ್ಲಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ. ನಂತರ ಚಿತ್ರದ ನಾಯಕಿ, ತಾಂತ್ರಿಕ ವರ್ಗದ ಬಗ್ಗೆ ಪ್ರಕಟಿಸಲಾಗುತ್ತದೆಯಂತೆ.

Facebook Comments