ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.29- ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇಂದು ಭಾರತೀಯ ಜನತಾ ಪಕ್ಷಕ್ಕೆ ವಿದ್ಯುಕ್ತವಾಗಿ ಸೇರ್ಪಡೆಯಾದರು. ಇದರೊಂದಿಗೆ ಬಿಜೆಪಿಗೆ ಕ್ರೀಡಾ ತಾರೆಯ ವಿಶೇಷ ಆಕರ್ಷಣೆಯ ಶಕ್ತಿಯೊಂದು ಲಭಿಸಿದಂತಾಗಿದೆ.

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ವಿಶೇಷ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್ ಸಮ್ಮುಖದಲ್ಲಿ ಸೈನಾ ಬಿಜೆಪಿಗೆ ಸೇರ್ಪಡೆಯಾದರು.
ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದು ಸೈನಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು.

ಬಿಜೆಪಿಗೆ ಸೇರ್ಪಡೆಯಾದ ನಂತರ ಮಾತನಾಡಿದ ಸೈನಾ, ಈ ಪಕ್ಷದ ತತ್ವ-ಸಿದ್ಧಾಂತ ಮತ್ತು ಆದರ್ಶಗಳು ನನಗೆ ಮೊದಲಿನಿಂದಲೂ ಪ್ರೇರಣೆ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರಾಭಿವೃದ್ಧಿ ಮತ್ತು ಜನಪರ ಧೋರಣೆಗಳಿಂದಾಗಿ ನಾನು ಪ್ರಭಾವಿತಳಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಘೋಷಿಸಿದರು.

ಭಾರತದ ಹೆಮ್ಮೆಯ ಪುತ್ರಿ ಸೈನಾ ಅವರ ಸೇರ್ಪಡೆಯಿಂದ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ. ಅನೇಕ ಕ್ರೀಡಾಪಟುಗಳು ಈಗಾಗಲೇ ಭಾರತೀಯ ಜನತಾ ಪಕ್ಷದ ತತ್ವ-ಸಿದ್ಧಾಂತಗಳಿಗೆ ಮೆಚ್ಚಿ ಸೇರ್ಪಡೆಯಾಗಿದ್ದಾರೆ ಎಂದು ಅರುಣ್‍ಕುಮಾರ್ ಹೇಳಿದರು.

ಸೈನಾ ಅವರಿಗೆ ಬಿಜೆಪಿಯಲ್ಲಿ ಮಹತ್ವದ ಹೊಣೆಗಾರಿಕೆ ದೊರೆಯಲಿದ್ದು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಾರಾ ಪ್ರಚಾರಕರಾಗಿ ಭಾಗವಹಿಸಲಿದ್ದಾರೆ. ಬಿಜೆಪಿಯ ಕ್ರೀಡಾ ವಿಭಾಗದ ಉನ್ನತ ಹುದ್ದೆ ಇವರಿಗೆ ಲಭಿಸುವ ನಿರೀಕ್ಷೆ ಇದೆ. ವಿಶ್ವದ ಮಾಜಿ ನಂ.1 ಬ್ಯಾಡ್ಮಿಂಟನ್ ತಾರೆ ಒಟ್ಟು 24 ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ಪಡೆದಿದ್ದಾರೆ.

Facebook Comments

Sri Raghav

Admin