ಬಾಗಲಗುಂಟೆ ಪೊಲೀಸರ ಬಲೆಗೆ ಬಿದ್ದ ಬೈಕ್ ಕಳ್ಳ, 7,20,000 ಮೌಲ್ಯದ 18 ವಾಹನಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27- ದುಶ್ಚಟಗಳ ದಾಸನಾಗಿ ಮನೆ ಮುಂದೆ ನಿಲ್ಲಿಸಿರುವ ವಾಹನಗಳನ್ನು ಕಳುವು ಮಾಡಿ ಇಬ್ಬರು ಮಹಿಳೆಯನ್ನು ವಿವಾಹವಾಗಿ ಮೋಜಿನ ಜೀವನ ನಡೆಸುತ್ತಿದ್ದ ಖತರ್ನಾಕ್ ಬೈಕ್ ಕಳ್ಳನನ್ನು ಸೆರೆ ಹಿಡಿದಿರುವ ಬಾಗಲಗುಂಟೆ ಪೊಲೀಸರು 7,20,000 ಮೌಲ್ಯದ 18 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಗೌರಿಬಿದನೂರಿನ ಮಂಚೇನಹಳ್ಳಿ ಗ್ರಾಮದ ಶಶಿಕುಮಾರ್ ಅಲಿಯಾಸ್ ಶಶಿ ಅಲಿಯಾಸ್ ಗುಂಡ್ವ (30) ಬಂಧಿತ ಆರೋಪಿ.

ಕಳೆದ 15ರಂದು ಬಾಗಲಗುಂಟೆಯ ಡಿಫೆನ್ಸ್ ಕಾಲೋನಿಯಲ್ಲಿ ದೇವರಾಜ್ ಎಂಬುವವರು ಬೆಳಗ್ಗೆ 8.30ರ ಸಮಯದಲ್ಲಿ ಮನೆ ಮುಂದೆ ಬೈಕ್ ನಿಲ್ಲಿಸಿ 9.30ಕ್ಕೆ ಬಂದು ನೋಡಿದಾಗ ಬೈಕ್ ಕಾಣೆಯಾಗಿತ್ತು. ಈ ಕುರಿತಂತೆ ದೇವರಾಜ್ ನೀಡಿದ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಬಾಗಲಗುಂಟೆ ಪೊಲೀಸರು ಬೈಕ್ ಕಳ್ಳನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆತ 2019ರಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿ ಅದೇ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ. ಆರೋಪಿ ದುಶ್ಚಟಗಳ ದೈನಂದಿನ ಖರ್ಚಿಗಾಗಿ ಬೈಕ್‍ಗಳನ್ನು ಕಳುವು ಮಾಡುತ್ತಿದ್ದೆ ಎಂದು ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ. ಆತ ಇಬ್ಬರು ಮಹಿಳೆಯರನ್ನು ವಿವಾಹವಾಗಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗಲಗುಂಟೆಯಲ್ಲಿ 9, ಮಾದನಾಯಕನಹಳ್ಳಿಯಲ್ಲಿ 3, ಆರ್‍ಎಂಸಿ ಯಾರ್ಡ್‍ನಲ್ಲಿ 1 ಸೇರಿದಂತೆ 13 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 5 ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆ ಹಾಗೂ ಬೈಕ್ ಕಳವು ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಕಾರ್ಯಾಚರಣೆಯನ್ನು ಪೊಲೀಸರು ಕೈಗೊಂಡಿದ್ದಾರೆ.  ಎಸಿಪಿ ಶ್ರೀನಿವಾಸರೆಡ್ಡಿ ಮಾರ್ಗದರ್ಶನದಲ್ಲಿ ಬಾಗಲಗುಂಟೆ ಇನ್ಸ್‍ಪೆಕ್ಟರ್ ವೆಂಕಟೇಗೌಡ ಮತ್ತು ಸಿಬ್ಬಂದಿ ವರ್ಗದವರು ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments