ಎಥೆನಾಲ್ ಬಳಕೆ ಹೆಚ್ಚಳಕ್ಕೆ ಕ್ರಮ, ಆತ್ಮ ನಿರ್ಭರ ಭಾರತಕ್ಕೆ ಸಂಕಲ್ಪ: ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ, ಜ.17- ರೈತರ ಆದಾಯ ದ್ವಿಗುಣಕ್ಕೆ ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ. ಆದರೆ, ಕೃಷಿ ಕಾಯ್ದೆ ಜಾರಿಗೆ ತಂದಿರುವ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದಿಲ್ಲಿ ಕಿಡಿಕಾರಿದ್ದಾರೆ. ಬಾಗಲಕೋಟೆಯಲ್ಲಿ ನಿರಾಣಿ ಶುಗರ್ಸ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮೋದಿ ಅವರ ಆತ್ಮ ನಿರ್ಭರ ಭಾರತ್ ಗೆ ದೇಶಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ. ಅದರಂತೆ ನಿರಾಣಿ ಶುಗರ್ಸ್ ಕೂಡ ಇದಕ್ಕೆ ಸ್ಪಂದಿಸಿರುವುದು ಒಳ್ಳೆಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೆಟ್ರೋಲ್, ಡೀಸೆಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಆಮದಿನಿಂದ ದೇಶಕ್ಕೆ ಬಹುದೊಡ್ಡ ಆರ್ಥಿಕ ಹೊರೆ ಬೀಳುತ್ತಿದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬದಲಿ ಎಥೆನಾಲ್ ಬಳಕೆಗೆ ಉತ್ತೇಜನ ನೀಡಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಎಥೇಚ್ಛವಾಗಿ ಎಥೆನಾಲ್ ಉತ್ಪಾದನೆಯಿಂದ ವಿದೇಶಿ ವಿನಿಮಯದಲ್ಲಿ ಅಲ್ಪಮಟ್ಟಿಗೆ ನೆರವಾಗಬಹುದು. ಹಾಗಾಗಿ ಎಥೆನಾಲ್ ಮೇಲಿನ ಜಿಎಸ್‍ಟಿಯನ್ನು ಶೇ.5ಕ್ಕೆ ಇಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಎಥೆನಾಲ್ ಬಳಕೆಯಿಂದ ಕಬ್ಬು ಬೆಳೆಗಾರರಿಗೆ ಸಾಕಷ್ಟು ಅನುಕೂಲಗಳಿವೆ. ಅವರ ಆದಾಯ ಹೆಚ್ಚಾಗಲಿದೆ ಎಂದು ತಿಳಿಸಿದರು. ನಮ್ಮ ಸರ್ಕಾರ ಎಥೆನಾಲ್‍ಗಾಗಿಯೇ ಪ್ರತ್ಯೇಕ ನೀತಿಯೊಂದನ್ನು ಜಾರಿಗೆ ತರುತ್ತಿದೆ. ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಅವಧಿಯಲ್ಲಿ ಎಥೆನಾಲ್ ನೀತಿ ಏಕೆ ಇರಲಿಲ್ಲ. ಏಕೆಂದರೆ ಅವರ ಉದ್ದೇಶ ಸರಿ ಇರಲಿಲ್ಲ ಎಂದು ಅಮಿತ್ ಷಾ ಕಿಡಿಕಾರಿದ್ದಾರೆ.

ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ರೈತರಿಗೆ ವರ್ಷಕ್ಕೆ 6 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. 3 ಕೃಷಿ ಕಾಯ್ದೆಗಳು ರೈತರ ಜೀವನ ಮಟ್ಟವನ್ನು ಸುಧಾರಣೆ ಮಾಡಲಿವೆ. ಆದರೆ, ಇದರ ಬಗ್ಗೆ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ. ರೈತರು ತಮ್ಮ ಬೆಳೆಯನ್ನು ದೇಶದ ಯಾವುದೇ ಮೂಲೆಯಲ್ಲಾದರೂ ಮಾರಾಟ ಮಾಡುವಂತಹ ಉತ್ತಮ ಕಾಯ್ದೆ ಬಗ್ಗೆ ಬೆಂಬಲ ವ್ಯಕ್ತವಾಗಬೇಕಿತ್ತು ಎಂದು ಹೇಳಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿಗಳು ಮುಚ್ಚುವುದಿಲ್ಲ. ಬದಲಾಗಿ ಅವು ಡಿಜಿಟಲೀಕರಣಗೊಳ್ಳಲಿದ್ದು, ಪರಸ್ಪರ ಸಂಪರ್ಕಗೊಳ್ಳಲಿವೆ ಎಂದು ಹೇಳಿದರು.
ರೈತರಿಗಾಗಿ ಮೋದಿ ಸರ್ಕಾರ 13 ಲಕ್ಷ ಕೋಟಿ ಸಾಲ ನೀಡಿದೆ. ಕಾಂಗ್ರೆಸ್ ಸರ್ಕಾರ ಕೇವಲ 6 ಲಕ್ಷ ಕೋಟಿ ಸಾಲ ನೀಡಿತ್ತು. ರೈತರಿಗೆ ಬಿಜೆಪಿ ಆಡಳಿತಾವಧಿಯಲ್ಲಿ ಸಾಕಷ್ಟು ನೆರವಾಗಿದೆ ಎಂದು ಅವರು ಹೇಳಿದರು.

ಮುದ್ರಾ ಯೋಜನೆಯಡಿ ಹಲವಾರು ಕಾರ್ಖಾನೆಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ. ಒಂದೇ ದೇಶ ಒಂದೇ ಕಾನೂನು ಎಂಬುದಕ್ಕೆ 371 ಕಾಯ್ದೆಯನ್ನು ಕಾಶ್ಮೀರದಲ್ಲಿ ತೆಗೆದುಹಾಕಿ ದಿಟ್ಟ ನಿರ್ಧಾರ ಕೈಗೊಂಡಿದ್ದೇವೆ. ಹಿಂದೆ ದೇಶ ಆಳಿದ ಕಾಂಗ್ರೆಸ್‍ನವರು ರೈತರಿಗಾಗಲಿ ಅಥವಾ ಜನರಿಗಾಗಲಿ ಉಪಯೋಗವಾಗುವಂತಹ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಬದಲಾಗಿ ಒಡೆದು ಆಳುವ ತಂತ್ರವನ್ನೇ ಹೆಣೆದರು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ದೇಶ ಒಗ್ಗಟ್ಟಾಗಿ ಪ್ರಗತಿಯತ್ತ ಹೆಜ್ಜೆ ಹಾಕಲು ಪ್ರತಿಯೊಬ್ಬರೂ ಕಂಕಣಬದ್ಧರಾಗಿದ್ದಾರೆ. ಕರ್ನಾಟಕದ ಜನರನ್ನು ನಾನು ಎಂದೂ ಮರೆಯುವುದಿಲ್ಲ. ಕಳೆದ 2014ರ ಅಥವಾ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರಿಗೆ ಅಪಾರ ಪ್ರೀತಿ ಧಾರೆ ಎರೆದಿದ್ದಾರೆ. ಅದಕ್ಕೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನ ಪರಿಶ್ರಮವನ್ನು ಗೌರವಿಸುತ್ತೇವೆ ಎಂದು ಹೇಳಿದರು.

Facebook Comments