ಬಗರ್ ಹುಕ್ಕುಂ ಸಮಿತಿಗಳಿಗೆ ಅಧ್ಯಕ್ಷರ ನೇಮಕ : ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.22- ಬಗರ್ ಹುಕ್ಕುಂ ಸಮಿತಿಗಳಿಗೆ ಶೀಘ್ರದಲ್ಲೇ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿಂದು ಹೇಳಿದರು. ಶಾಸಕ ಚಂದ್ರಪ್ಪ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ವೇಳೆ ಅನೇಕ ಶಾಸಕರು, ಬಗರ್ ಹುಕ್ಕುಂ ಸಮಿತಿ ರಚನೆಯಾಗಿಲ್ಲ. ಕೂಡಲೇ ರಚಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಅಶೋಕ್, ಶೀಘ್ರದಲ್ಲೇ ಸಮಿತಿ ರಚನೆ ಮಾಡಲಾಗುವುದು. ಎಲ್ಲೆಲ್ಲಿ ತೊಂದರೆ ಇದೆಯೋ ಅದನ್ನು ಇತ್ಯರ್ಥಪಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡುವುದಾಗಿ ಹೇಳಿದರು. ನೋಂದಾಯಿತ ಸೊಸೈಟಿಗಳು ಅಸ್ತಿತ್ವ ಕಳೆದುಕೊಂಡಿದ್ದರೆ ಅವುಗಳಿಗೆ ನೀಡಿರುವ ಜಮೀನುಗಳನ್ನು ವಾಪಸ್ ಪಡೆಯುವ ಬಗ್ಗೆ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಲಾಗುವುದು. ಸಾಧ್ಯವಾದರೆ ಈ ಅಧಿವೇಶನದಲ್ಲಿ ತಿದ್ದುಪಡಿ ಮಾಡುವುದಾಗಿ ಹೇಳಿದರು.

ಅನೇಕ ಕಡೆ ನೋಂದಾಯಿತ ಸೊಸೈಟಿಗಳ ಹೆಸರಿನಲ್ಲಿ ಜಮೀನು ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದರೆ ಈ ಸೊಸೈಟಿಗಳು ಅಸ್ತಿತ್ವ ಕಳೆದುಕೊಂಡಿವೆ ಹೀಗಾಗಿ ಜಮೀನನ್ನು ಹಿಂಪಡೆಯುವ ಬಗ್ಗೆ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದರು. ಜೆಡಿಎಸ್ ಎಸ್.ಆರ್. ಶ್ರೀನಿವಾಸ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುಬ್ಬಿ ಕ್ಷೇತ್ರದಲ್ಲಿ 15 ದಿನದೊಳಗೆ ಬಗರ್ ಹುಕ್ಕುಂ ಸಮಿತಿ ರಚನೆ ಮಾಡುವ ಭರವಸೆ ನೀಡಿದರು.

Facebook Comments