ಬಾಲಸುಬ್ರಹ್ಮಣಂ ನಿಧನಕ್ಕೆ ವಿಧಾನ ಪರಿಷತ್‍ನಲ್ಲಿ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.26- ದೇಶ ಕಂಡ ಅಪ್ರತಿಮ ಗಾಯಕ ಎಸ್.ಪಿ.ಬಾಲಸುಬ್ರಹ್ಮಣಂ ಅವರ ನಿಧನಕ್ಕೆ ವಿಧಾನ ಪರಿಷತ್‍ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರು ಸಂತಾಪ ಸೂಚನೆಯನ್ನು ಮಂಡಿಸಿ, ಬಾಲಸುಬ್ರಹ್ಮಣ್ಯಂ ಅವರು ಹುಟ್ಟು ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು.

ಆಂಧ್ರಪ್ರದೇಶ ಸರ್ಕಾರದಿಂದ 25 ಬಾರಿ ನಂದಿ ಪ್ರಶಸ್ತಿ, ಆರು ರಾಷ್ಟ್ರ ಪ್ರಶಸ್ತಿ ಸೇರಿ ನೂರಾರು ಪ್ರಶಸ್ತಿಗಳು ಬಾಲಸುಬ್ರಹ್ಮಣ್ಯಮ್ ಅವರನ್ನು ಹುಡಿಕೊಂಡು ಬಂದಿವೆ. ಭಾರತೀಯ ಸಂಸ್ಕøತಿಯ ರಾಯಭಾರಿಯಂತಿದ್ದರು, ಅವರ ನಿಧನದಿಂದಭಾರತೀಯ ಚಿತ್ರರಂಗದ ದ್ರುವತಾರೆಯೊಂದು ಅಸ್ತಂಗತವಾಗಿದೆ ಎಂದು ವಿಷಾದಿಸಿದರು.

ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ದೇವರ ದುಡ್ಡ ಚಿತ್ರದ ತರಿಕೆರೆ ಏರಿ ಮೇಲೆ ಹಾಡು ವೇಗವಾಗಿ ಹಾಡಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದರು. ನಾಗರಹಾವು ಚಿತ್ರದಲ್ಲಿ ಹಾವಿನದ್ವೇಷ ಎಂಬ ಆಕ್ರೋಶ ಭರಿತ ಗೀತೆಯನ್ನು ಚಿತ್ರಕತೆಯನ್ನು ಹಾಡಿನಲ್ಲಿ ಕಟ್ಟಿ ಕೊಟ್ಟಿದ್ದರು. ಅಮೃತವರ್ಷಿಣಿ ಚಿತ್ರದಲ್ಲಿ ಈ ಸುಂದರ ಬೆಳದಿಂಗಳು ಎಂಬ ಯುಗಳ ಗೀತೆ ಹಾಡಿದರು.

ಎರಡು ವರ್ಷದ ಹಿಂದೆ ನಮ್ಮೂರಿಗೆ ಬಂದಿದ್ದರು. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು. ವರನಟ ಡಾ.ರಾಜ್ ಕುಮಾರ್ ಅವರು ಬಾಲಸುಬ್ರಹ್ಮಣ್ಯಮ್ ಅವರ ಕುರಿತು ಮಾತನಾಡುವಾಗ ಅವರು ಆತ್ಮವಾಗಿದ್ದರು, ನಾನು ದೇಹವಾಗಿದ್ದೆ ಎಂದಿದ್ದರು. ಸರ್ಕಾರ ಅವರ ಕುರಿತು ಮುಂದಿನ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿ ಎಂದರು.

ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಬಾಲಸುಬ್ರಹ್ಮಣ್ಯಮ್ ಅವರು ವಿಶ್ವವಿಖ್ಯಾತ ಗಾಯಕರಾಗಿದ್ದರು. ಕಳೆದ ತಿಂಗಳು 5 ರಂದು ಕೊರೊನಾ ಸೋಂಕು ಮತ್ತು ಶ್ವಾಸಕೋಶ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಚೇತರಿಕೆಗೆ ಪ್ರಾರ್ಥಿಸಿದ್ದರು ಫಲಿಸಲಿಲ್ಲ. ಸುಮಾರು 17 ಭಾಷೆಗಳಲ್ಲಿ 40 ಸಾವಿರ ಹಾಡು ಆಡಿದ್ದಾರೆ, ಅದರಲ್ಲಿ 15 ಸಾವಿರ ಕನ್ನಡ ಭಾಷೆಗೆ ಸೇರಿವೆ. ಆರು ಭಾಷೆಯ ಹಾಡುಗಳಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಗಾಯಕರಾಗಿ, ನಟರಾಗಿ, ಸಂಗೀತ ಸಂಯೋಜಕರಾಗಿ, ನಿರ್ಮಾಪಕರಾಗಿ, ನಿರೂಪಕರಾಗಿ, ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರ ಸಂಗೀತ ನಿರ್ದೇಶನದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ 21 ಹಾಡು ಹಾಡಿ ವಿಶ್ವದಾಖಲೆ ಮಾಡಿದ್ದಾರೆ. ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಅವರ ಪ್ರತಿಭೆ ಗುರುತಿಸಿದ್ದು ದೇಶ ಕಂಡ ಅಪ್ರತಿಮ ಗಾಯಕಿ ಎಸ್.ಜಾನಕಿ ಅವರು. ಬಾಲಸುಬ್ರಹ್ಮಣ್ಯಮ್ ತಮ್ಮ 50 ನೇ ವರ್ಷದ ಕಾರ್ಯಕ್ರಮದಲ್ಲಿ ಇನ್ನೊಬ್ಬ ಹಿರಿಯ ಗಾಯಕ ಜೇಸುದಾಸ್ ಅವರ ಪಾದಪೂಜೆ ಮಾಡಿ ಸರಳತೆ ಮೆರೆದರು ಎಂದು ಹೇಳಿದರು.

ಮತ್ತೊಂದು ಜನ್ಮವಿದ್ದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬುದು ಬಾಲಸುಬ್ರಹ್ಮಣ್ಯಂ ಅವರ ಆಸೆ. ಆ ಆಸೆಯಂತೆ ಅವರು ಕನ್ನಡ ನಾಡಿನಲ್ಲಿ ಹುಟ್ಟಲಿ ಎಂದು ಹಾರೈಸಿದರು. ಬಾಲಸುಬ್ರಹ್ಮಣ್ಯಮ್ ನಿಧನಕ್ಕೆ ಸದನದಲ್ಲಿ ಒಂದು ನಿಮಿಷ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.

Facebook Comments