ಅನ್ಯ ರಾಜ್ಯದ ಹಾಲು ಮಾರಾಟಕ್ಕೆ ನಿರ್ಬಂಧ ಹೇರಲು ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

milk-ped
ಆನೇಕಲ್, ಜೂ.30-ಕರ್ನಾಟಕದಲ್ಲಿ ಅನ್ಯ ರಾಜ್ಯಗಳ ಹಾಲು ಮಾರಾಟ ಮಾಡಲು ರಾಜ್ಯ ಸರ್ಕಾರ ನಿರ್ಬಂಧ ಹೇರಬೇಕು ಎಂದು ಬಮೂಲ್ ಅಧ್ಯಕ್ಷ ಬಿ.ಜೆ. ಆಂಜಿನಪ್ಪ ಒತ್ತಾಯಿಸಿದರು. ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟ, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಸಹಯೋಗದಲ್ಲಿ ಕಾರ್ಯದರ್ಶಿ ಗಳಿಗೆ ಏರ್ಪಡಿಸಿದ್ದ ಒಂದು ದಿನದ ಜಿಲ್ಲಾ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ಶೇ.40 ರಷ್ಟು ಗುಣಮಟ್ಟವಿಲ್ಲದ ಅನ್ಯ ರಾಜ್ಯಗಳ ಹಾಲು ಮಾರಾಟವಾಗುತ್ತಿದ್ದು ಇದರಿಂದ ಜನರು ನಾನಾ ಖಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಜೊತೆಗೆ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿಗೆ ಬೇಡಿಕೆ ಹೆಚ್ಚಾಗಿ ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ಕೇರಳ ಹಾಗೂ ಮಧ್ಯ ಪ್ರದೇಶದಲ್ಲಿ ಬೇರೆ ರಾಜ್ಯಗಳ ಹಾಲನ್ನು ನಿಷೇಧಿಸಿರುವ ಹಾಗೆ ರಾಜ್ಯದಲ್ಲಿಯೂ ಸಹ ರಾಜ್ಯ ಸರ್ಕಾರ ಬೇರೆ ರಾಜ್ಯಗಳ ಹಾಲಿನ ಮಾರಾಟವನ್ನು ನಿಷೇಧಿಸಬೇಕು ಎಂದು ಹೇಳಿದರು.

ರಾಷ್ಟ್ರದಲ್ಲಿಯೇ ಸ್ವಂತ ಬಲದ ಮೇಲೆ 500 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾಡೈರಿ ಸ್ಥಾಪನೆ ಮಾಡುತ್ತಿರುವುದು ಬೆಂಗಳೂರು ಹಾಲು ಒಕ್ಕೂಟವೆಂಬ ಹೆಗ್ಗಳಿಕೆ ಇದೆ. ಈ ನಿಟ್ಟಿನಲ್ಲಿ ಇನ್ನೆರಡು ತಿಂಗಳಲ್ಲಿ ಕಡಿತ ಗೊಳಿಸಿರುವ ಹಾಲಿನ ದರವನ್ನು ಏರಿಕೆ ಮಾಡಲಾಗುವುದು ಎಂದು ತಿಳಿಸಿದರು. ರೈತರಿಗೆ ಸರ್ಕಾರದ ಯೋಜನೆಗಳು ಪೂರ್ಣ ಪ್ರಮಾಣ ದಲ್ಲಿ ಕೈ ಸೇರಬೇಕಾದರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ನಡುವೆ ಉತ್ತಮ ಸಂಬಂಧವಿದ್ದಾಗ ಮಾತ್ರ ಸಾಧ್ಯವಾಗಿದೆ ಎಂದರು. ಆನೇಕಲ್ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಮೋಹನ್, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಜಯ್ ಕುಮಾರ್, ಉಪಾಧ್ಯಕ್ಷ ಎನ್. ಚಂದ್ರಪ್ಪ, ಎ.ನಾಗೇಶ್, ಸೋಂಪುರ ಅಮರೇಶ್ ರೆಡ್ಡಿ, ಬಿ. ರವೀಶಯ್ಯ, ಶ್ರೀನಿವಾಸ್, ಡಾ.ಎನ್. ಕೃಷ್ಣಾರೆಡ್ಡಿ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin