ಕೌಟುಂಬಿಕ ಕಲಹಕ್ಕೆ 10 ಲಕ್ಷ ಮೌಲ್ಯದ ಬಾಳೆ ತೋಟ ಧ್ವಂಸ..!

ಈ ಸುದ್ದಿಯನ್ನು ಶೇರ್ ಮಾಡಿ

ನಾಗಮಂಗಲ, ನ.2- ಕುಟುಂಬ ಕಲಹಕ್ಕೆ ಬೆಳೆದು ನಿಂತಿದ್ದ 10 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಬಾಳೆ ಬೆಳೆ ನಾಶವಾಗಿದೆ. ತಾಲ್ಲೂಕಿನ ಹೊಣಕೆರೆ ಹೋಬಳಿಯ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ಸಾಲ ನೀಡುವ ವಿಚಾರಕ್ಕೆ 10 ಲಕ್ಷ ಮೌಲ್ಯದ ಬಾಳೆ ತೋಟವನ್ನು ಧ್ವಂಸ ಮಾಡಲಾಗಿದೆ.

ಗ್ರಾಮದ ಕೃಷ್ಣೇಗೌಡ ಅವರು ತಮ್ಮ ಸಹೋದರಿ ಪಾರ್ವತಿ ಮತ್ತು ಆಕೆಯ ಮಗಳು ಸಾವಿತ್ರಿ ಬಳಿ ಬಾಳೆ ಬೆಳೆಯುವ ಉದ್ದೇಶಕ್ಕಾಗಿ 1 ಲಕ್ಷ ರೂ. ಕೈ ಸಾಲ ಪಡೆದುಕೊಂಡು ಪ್ರತಿ ತಿಂಗಳು ಬಡ್ಡಿ ಪಾವತಿಸುತ್ತಿದ್ದರು. ಕೆಲ ತಿಂಗಳ ನಂತರ ಪಾರ್ವತಿ ಮತ್ತು ಸಾವಿತ್ರಿ ಅವರು ಹಣವನ್ನು ಈ ಕೂಡಲೇ ಹಿಂತಿರುಗಿಸುವಂತೆ ಪಟ್ಟು ಹಿಡಿದಾಗ ಕೃಷ್ಣೇಗೌಡ ಅವರು ಬಾಳೆ ಬೆಳೆ ಕೈ ಸೇರಿದ ಕೂಡಲೇ ನಿಮ್ಮ ಸಾಲ ತೀರಿಸುವುದಾಗಿ ಹೇಳಿದ್ದರು.

ಈ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ವಾದ ವಿವಾದ ನಡೆದು ಪೊಲೀಸ್ ಠಾಣೆ ಮೆಟ್ಟಿಲು ಏರುವಂತಾಗಿತ್ತು. ಪೊಲೀಸರು ಸಂಧಾನ ನಡೆಸಿದರೂ ಪಟ್ಟು ಬಿಡದ ಪಾರ್ವತಮ್ಮ ಮತ್ತು ಸಾವಿತ್ರಿ ಅವರು ಹಣದ ವಿಚಾರವಾಗಿ ಕೃಷ್ಣೇಗೌಡ ದಂಪತಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ.  ಈ ಘಟನೆ ನಂತರ ಪಾರ್ವತಿ ಮತ್ತು ಆಕೆಯ ಪುತ್ರಿ ಸಾವಿತ್ರಿ ಗುಂಪು ಕಟ್ಟಿಕೊಂಡು ತಮ್ಮ ತೋಟಕ್ಕೆ ನುಗ್ಗಿ ಕುಡುಗೋಲು ಮತ್ತು ಮಚ್ಚುಗಳಿಂದ ಬಾಳೆ ಬೆಳೆ ನಾಶಪಡಿಸಿದ್ದಾರೆ ಎಂದು ಕೃಷ್ಣೇಗೌಡ ದೂರಿದ್ದಾರೆ.

ನಾವು ಬಾಳೆ ಬೆಳೆ ಕೈ ಸೇರಿದ ನಂತರ ಸಾಲ ವಾಪಸ್ ಮಾಡುತ್ತೇವೆ ಎಂದರೂ ಬೆಳೆ ನಾಶ ಮಾಡಿರುವುದು ಖಂಡನೀಯ. ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ಕೃಷ್ಣೇಗೌಡ ದಂಪತಿ ಚಂದ್ರಮ್ಮ ತಿಳಿಸಿದ್ದಾರೆ.

Facebook Comments