ಬನಶಂಕರಿ ಸಾಮೂಹಿಕ ವಿವಾಹದಲ್ಲಿ ಹಸೆಮಣೆ ಏರಿದ 35 ಅಂತರ್ಜಾತಿ ಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.22- ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ಹಮ್ಮಿಕೊಂಡಿದ್ದ 22 ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುವಂತಿತ್ತು. ವಿದ್ಯಾವಾಚಸ್ಪತಿ ಡಾ.ವಿಶ್ವ ಸಂತೋಷ ಭಾರತಿ ಶ್ರೀಪಾದರು ಹಾಗೂ ಬಸವೇಶ್ವರ ಮಠದ ಧನಂಜಯ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ 70ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು.

70 ಮಂದಿ ಜೋಡಿಗಳಲ್ಲಿ 35 ವಧು-ವರರು ತಮ್ಮ ಹಿರಿಯರ ಒಪ್ಪಿಗೆ ಪಡೆದು ಸತಿ-ಪತಿಗಳಾದ ಅಂತರ್ಜಾತಿ ಜೋಡಿ ಎನ್ನುವುದು ವಿಶೇಷವಾಗಿತ್ತು. ಚಿತ್ತಾಪುರದ ಸುಮಿತ್ರ ಹಾಗೂ ಕುಂದಗೋಳದ ಕರಿಯಪ್ಪ ಕೋಳಿವಾಡ ಅಂಧ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು. ಇದರ ಜತೆಗೆ ಎರಡು ವಿಕಲಚೇತನ ಜೋಡಿಯೂ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾಯಿತು.

ಕಂದಾಯ ಸಚಿವ ಆರ್.ಅಶೋಕ್, ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಖ್ಯಾತ ಚಿತ್ರನಟ ಪ್ರಜ್ವಲ್ ದೇವರಾಜ್, ಶಾಸಕರಾದ ರವಿ ಸುಬ್ರಮಣ್ಯ, ಸತೀಶ್ ರೆಡ್ಡಿ, ಎಂ.ಕೃಷ್ಣಪ್ಪ, ರಾಜ್ಯಸಭಾ ಸದಸ್ಯಕೆ.ನಾರಾಯಣ್, ಮಾಜಿ ಸಚಿವರಾದ ಪಿಜಿಆರ್ ಸಿಂಧ್ಯಾ, ಬಿ.ಜೆ.ಪುಟ್ಟಸ್ವಾಮಿ, ಕಟ್ಟಾ ಸುಬ್ರಮಣ್ಯನಾಯ್ಡು, ಬಿ.ಟಿ. ಲಲಿತಾ ನಾಯಕ್, ಮಾಜಿ ಶಾಸಕ ಟಿ.ಎ.ಶರವಣ, ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್.ವೀರಯ್ಯ, ಸಮಾಜ ಸೇವಕ ಬಾಗೇಗೌಡ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ವಧು-ವರರನ್ನು ಆಶಿರ್ವದಿಸಿದರು.

ಸಮೂಹಿಕ ವಿವಾಹ ವೇದಿಕೆ ವ್ಯವಸ್ಥಾಪಕ ಹಾಗೂ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜ್ ಮಾತನಾಡಿ, ಕಳೆದ 22 ವರ್ಷಗಳಿಂದ ನಿರಂತರವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಇಂತಹ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದರು.

ಅದ್ದೂರಿ ವಿವಾಹಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ 22 ವರ್ಷದ ಹಿಂದೆ ಆರಂಭಿಸಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇದುವರೆಗೂ ನೂರಾರು ಮಂದಿ ಬನಶಂಕರಿ ದೇವಿಯ ಕಟಾಕ್ಷದಿಂದ ಸತಿ-ಪತಿಗಳಾಗಿ ಉತ್ತಮ ಜೀವನ ಸಾಗಿಸುತ್ತಿದ್ದಾರೆ.

ಈ ಬಾರಿ ಆಂಧ ಜೋಡಿ ಸೇರಿದಂತೆ ಮೂವರು ವಿಕಲಚೇತನ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿವೆ. 70 ಜೋಡಿಗಳಲ್ಲಿ 35 ಜೋಡಿಗಳು ಅಂತರ್ಜಾತಿ ವಿವಾಹ ಮಾಡಿಕೊಳ್ಳುವ ಮೂಲದ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆ ಪದಾಕಾರಿಗಳಾದ ಮಾಜಿ ಮೇಯರ್ ಎಸ್.ಕೆ.ನಟರಾಜ್, ದಾಮೋದರ್ ನಾಯ್ಡು, ಮುತ್ತಪ್ಪ, ಹರಿಬಾಬು, ನಾರಾಯಣಸ್ವಾಮಿ ಮತ್ತಿತರು ವಿವಾಹ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.  ಸಮೂಹಿಕ ವಿವಾಹದವರಿಗೆ ತಾಳಿ, ಕಾಲುಂಗುರ, ಸೀರೆ, ಪಂಚೆ, ಬಾಸಿಂಗ ನೀಡಲಾಯಿತು. ವಧು-ವರರ ಕಡೆಯವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು.

Facebook Comments

Sri Raghav

Admin