ಒಂದಿಂಚೂ ಭೂಮಿ ಕೊಡಲ್ಲ : ಬಂಡೆಪ್ಪ ಕಾಶಂಪೂರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.19- ನಾಡಿನ ನೆಲಜಲ, ಭಾಷೆ ವಿಚಾರದಲ್ಲಿ ನಾವೆಲ್ಲ ಒಂದಾಗಿದ್ದು, ಒಂದು ವೇಳೆ ಧಕ್ಕೆ ಬಂದರೆ ನಾವೆಲ್ಲರೂ ಸೇರಿ ಹೋರಾಟ ಮಾಡುತ್ತೇವೆಯೇ ಹೊರತು ಒಂದಿಂಚು ಭೂಮಿಯನ್ನೂ ಕೊಡುವುದಿಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮವಾಗಿದ್ದರೂ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದಟತನದ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದರು.

ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದ ನಾಮಫಲಕದಲ್ಲಿ ಕನ್ನಡವನ್ನು ಕಡೆಗಣಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಮಿತ್ ಷಾ ಅವರ ಮುಂದೆ ರಾಜ್ಯ ಬಿಜೆಪಿ ನಾಯಕರಿಗೆ ಮಾತನಾಡುವ ಲಾಭವಿಲ್ಲ. ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದರೂ ಈ ರೀತಿ ನಿರ್ಲಕ್ಷಿಸಲಾಗಿದೆ. ಶಿಷ್ಟಾಚಾರವಿದ್ದರೆ ಕನ್ನಡದ ಫಲಕ ಹಾಕಬಾರದು ಎಂದು ಎಲ್ಲಾದರೂ ಇದೆಯೇ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರ ಇಚ್ಛಾಶಕ್ತಿಯನ್ನು ತೋರಬೇಕು. ತಮಿಳುನಾಡಿಗೆ ಹೋದರೆ ತಮಿಳು ಬಿಟ್ಟು ಬೇರೆ ಫಲಕಗಳನ್ನು ಹಾಕುವುದಿಲ್ಲ. ಹಾಗೆಯೇ ನಮ್ಮ ರಾಜ್ಯದಲ್ಲೂ ಇರಬೇಕಲ್ಲವೇ ಎಂದು ಪ್ರಶ್ನಿಸಿದರು.

#ಯಾರು ಪಕ್ಷ ಬಿಡುತ್ತಿಲ್ಲ:
ಜೆಡಿಎಸ್ ಪಕ್ಷವನ್ನು ಯಾರೂ ಬಿಟ್ಟುಹೋಗುತ್ತಿಲ್ಲ. ಎಲ್ಲರೂ ನಮ್ಮ ಜೊತೆಯಲ್ಲೇ ಇದ್ದಾರೆ. ಕೆಲವು ಅಸಮಾಧಾನಗಳಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಗೆಹರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‍ನ ವೀಕ್ಷಕರ ತಂಡದಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಮಧುಬಂಗಾರಪ್ಪ ಅವರ ಹೆಸರು ಇಲ್ಲವೆಂದ ಮಾತ್ರಕ್ಕೆ ಅವರು ಪಕ್ಷದಲ್ಲಿ ಇಲ್ಲವೆಂದು ಅರ್ಥವಲ್ಲ. ಪಕ್ಷ ಸಂಘಟನೆಗಾಗಿ ವೀಕ್ಷಕರ ತಂಡ ರಚನೆ ಮಾಡಲಾಗಿದೆ. ಗುಬ್ಬಿ ಶಾಸಕ ಶ್ರೀನಿವಾಸ್ ಬಗ್ಗೆಯೂ ಇದೇ ರೀತಿ ಹೇಳಲಾಗುತ್ತಿತ್ತು. ಜೆಡಿಎಸ್ ಸಭೆಗೆ ಅವರು ಬಂದಿರಲಿಲ್ಲವೇ ಎಂದು ಅವರು ಪ್ರಶ್ನೆ ಹಾಕಿದರು.

Facebook Comments