ಮೈಸೂರಿನಲ್ಲಿ ಬಂದ್ ವಿಫಲ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ. 27- ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತಪರ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಮೈಸೂರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬಂದ್ ಕೇವಲ ವಿವಿಧ ಸಂಘಟನೆಗಳ ಪ್ರತಿಭಟನೆಗಷ್ಟೇ ಸೀಮಿತವಾಗಿರುವಂತೆ ಕಂಡು ಬಂತು.

ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಂಯುಕ್ತ ಕಿಸಾನ್ ಮೋರ್ಚಾ, ವಿವಿಧ ರೈತ ಪರ ಸಂಘಟನೆಗಳು ಕೇಂದ್ರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ಇಂದು ಭಾರತ್ ಬಂದ್‍ಗೆ ಕರೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹಲವು ಸಂಘಟನೆಗಳು ಭಾರತ್ ಬಂದ್ ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದವು. ಕೆಲವು ಸಂಘಟನೆಗಳು ನೈತಿಕ ಬೆಂಬಲ ನೀಡುವುದಾಗಿ ಮಾತ್ರ ಘೋಷಿಸಿದ್ದವು. ವಿವಿಧ ಸಂಘಟನೆಗಳು ಇಂದು ಸಬರ್ಬನ್ ಬಸ್ ನಿಲ್ದಾಣ ಗಳಿಗೆ ತೆರಳಿ ಪ್ರತಿಭಟನೆ ನಡೆಸಿವೆ. ಕೆಲವು ಸಂಘಟನೆಗಳು ರಸ್ತೆಯಲ್ಲಿಯೇ ಕುಳಿತು ಪ್ರತಿಬಟನೆ ನಡೆಸಿದ್ದು ವಾಹನ ಸಂಚಾರಕ್ಕೆ ಕೆಲವು ಗಂಟೆಗಳ ಕಾಲ ತೊಡಕುಂಟಾಯಿತು.
ಬಸ್ ಸಂಚಾರಕ್ಕೆ ತೊಂದರೆಯಾಗದಂತೆ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.

ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂತು, ಸಾರಿಗೆ ಬಸ್ ಗಳು ಕೂಡ ಎಂದಿನಂತೆ ಸಂಚಾರ ಮುಂದುವರಿಸಿವೆ. ಅಂಗಡಿ ಮುಗ್ಗಟ್ಟು ತೆರೆಯಲಾಗಿದ್ದು, ವ್ಯಾಪಾರ ವಹಿವಾಟು ನಡೆದಿದೆ. ಆದರೆ ಎಪಿಎಂಸಿ ಮಾರುಕಟ್ಟೆಯಲ್ಲಿನ ವರ್ತಕರು ಮಾತ್ರ ಬಂದ್ É ಸಂಪೂರ್ಣ ಬೆಂಬಲ ನೀಡಿದ್ದರು.

ಹೋರಾಟಕ್ಕಿಳಿದವರು ನಮ್ಮ ಬಂದ್‍ಗೆ ಬೆಂಬಲ ನೀಡಿ ಎಂದು ಅಂಗಡಿಗಳ ಮಾಲೀಕರಲ್ಲಿ ಮನವಿ ಮಾಡಿದರಾದರೂ, ಕೊರೊನಾ ಸಂಕಷ್ಟದಿಂದ ಈಗಾಗಲೇ ನಲುಗಿದ ಮಳಿಗೆಗಳ ಮಾಲೀಕರು ಅಂಗಡಿ ಬಂದ್ ಮಾಡಲು ನಿರಾಕರಿಸುತ್ತಿರುವುದು ಕಂಡು ಬಂತು. ದೇವರಾಜ ಮಾರುಕಟ್ಟೆ ಕೂಡ ಎಂದಿನಂತೆ ತೆರೆದಿತ್ತು.

ರಿಕ್ಷಾ ಸೇವೆಗಳು, ಕ್ಯಾಬ್ ಸೇವೆಗಳು ಲಭ್ಯವಿತ್ತು. ಜಿಲ್ಲಾ ಪ್ರವಾಸಿವಾಹನಗಳ ಮಾಲೀಕರ ಸಂಘದ ಪ್ರತಿನಿ ಬಿ.ಎಸ್.ಪ್ರಶಾಂತ್ ಭಾರತ್ ಬಂದ್ ಗೆ ಪ್ರವಾಸಿ ವಾಹನಗಳ ಸಂಘವು ನೈತಿಕ ಬೆಂಬಲ ನೀಡುತ್ತದೆ. ಕೊರೊನಾದಿಂದಾಗಿ ಸಾಲ ತೀರಿಸಲಾಗದೆ ಪ್ರವಾಸಿ ವಾಹನಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸುವುದು ಕಷ್ಟವಾಗಲಿದ್ದು, ವಾಹನಗಳು ಸಂಚರಿಸಲಿವೆ ಎಂದರು.

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಕೂಡ ಇಂದಿನಿಂದ ಜಿಲ್ಲೆಯಲ್ಲಿ ಆರಂಭವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಮೈಸೂರು ನಗರದ ಪೀಪಲ್ಸ್ ಪಾರ್ಕ್, ವಿಜಯ ವಿಠಲ, ನಿರ್ಮಲಾ ಕಾನ್ವೆಂಟ್ ಸೇರಿದಂತೆ ಐದು ಕಡೆ ಹಾಗೂ ಹುಣಸೂರು, ತಿ.ನರಸೀಪುರದ ತಲಾ ಒಂದು ಕೇಂದ್ರದಲ್ಲಿ ಪರೀಕ್ಷೆ ನಡೆದಿದೆ.

ಡಿಸಿಪಿ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ವಿವಿಧ ಠಾಣೆಗಳ ಎಸಿಪಿಗಳು ಸ್ಥಳದಲ್ಲಿ ಹಾಜರಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿರಿಸಿದ್ದರು.

Facebook Comments