ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡದ ಕಂಪು ಪಸರಿಸಿದ ಚಿಣ್ಣರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.1-ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಶಾಲಾ ಮಕ್ಕಳ ಕರ್ನಾಟಕ ವೈಭವ ಸಾಂಸ್ಕøತಿಕ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ದಕ್ಷಿಣ ವಲಯ-1ರ ಅರವಿಂದೋ ಮೆಮೊರಿಯಲ್ ಶಾಲೆಯ 80 ಮಕ್ಕಳು ಗೀತನಮನ ಮೂಲಕ ಕನ್ನಡದ ಕಾವ್ಯಲಹರಿವ ಸಂಸ್ಕøತಿ, ಸಂಸ್ಕಾರಗಳು ಮೆರೆವ ವೈವಿಧ್ಯಮಯ ವೈಭವಯುತವಾದ ತಾಯಿ ಭುವನೇಶ್ವರಿ ದೇವಿಗೆ ಹೃತ್ಪೂರ್ವಕವಾದ ನಮನ ಸಲ್ಲಿಸಿದರು.

ದಕ್ಷಿಣ ವಲಯ 4ರ ಥಣಿಸಂದ್ರ ಸರ್ಕಾರಿ ಪ್ರೌಢಶಾಲೆಯ 540 ವಿದ್ಯಾರ್ಥಿಗಳು ಎಳೆಯೋಣ ಬಾರಾ ಕನ್ನಡದ ತೇರು ಎಂಬ ನೃತ್ಯದ ಮೂಲಕ ಕನ್ನಡ ನಾಡು ನುಡಿ ಸಂಸ್ಕøತಿಯನ್ನು ಬಿಂಬಿಸುವ ನೃತ್ಯ ಕಣ್ಮನ ಸೆಳೆಯಿತು. ಬಸವನಗುಡಿಯ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ, ಹುಮೆನ್ಸ್ ಪೀಸ್ ಲೀಗ್ ಶಾಲೆ, ಆರ್.ವಿ.ಬಾಲಕಿಯರ ಪ್ರೌಢಶಾಲೆ, ಕೆಂಗೇರಿಯ ಪಂಡಿತ್ ಜವಾಹರಲಾಲ್‍ನೆಹರೂ ಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 700 ವಿದ್ಯಾರ್ಥಿಗಳು ನಡೆಸಿಕೊಟ್ಟ ಅರಳುವ ಪುಷ್ಪಗಳು ಕಾರ್ಯಕ್ರಮ ಜನಮನ ಸೂರೆಗೊಂಡಿತು.

ಕಗ್ಗಲೀಪುರದ ಕರ್ನಾಟಕ ಪಬ್ಲಿಕ್ ಶಾಲೆಯ 600 ವಿದ್ಯಾರ್ಥಿಗಳು ವೀರ ಮದಕರಿ ನಾಯಕನ ನೃತ್ಯರೂಪಕ ನಡೆಸಿಕೊಟ್ಟರೆ, ಕರಿತಿಮ್ಮನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಸ್ತೂರ ಬಾ ನಗರದ ಬಿಬಿಎಂಪಿ ಗಿರಿಮಾರುತಿ ಶಾಲೆ, ಚಾಮರಾಜಪೇಟೆಯ ಬೆಂಗಳೂರು ಭವನ ಪ್ರೆಸ್ ಶಾಲೆಯ 650 ಮಕ್ಕಳು ಸುಗ್ಗಿಯ ಸೊಬಗು, ಜನರಿಗೆ ಕೃಷಿ ಮಹತ್ವ ಹಾಗೂ ರೈತರ ಪರಿಶ್ರಮವನ್ನು ಪರಿಚಯಿಸುವ ಪ್ರದರ್ಶಿಸಿದ ನಿಟ್ಟಿನಲ್ಲಿ ಸುಗ್ಗಿ ಕಾಲ ಹಿಗ್ಗಿ ಬಂದಿತು ಕಾರ್ಯಕ್ರಮ ಮುದನೀಡಿತು.

ಬೆಂಗಳೂರು ದಕ್ಷಿಣ ಜಿಲ್ಲೆಯ ವಲಯ-4ರ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಯ 875 ವಿದ್ಯಾರ್ಥಿನಿಯರು ಸೂರ್ಯನಮಸ್ಕಾರ ಹಾಗೂ ಸರಳ ಆಸನಗಳನ್ನು ಮಾಡುವ ಮೂಲಕ ಯೋಗಾಸನದ ಮಹತ್ವ ಸಾರಿದರು. ಮಾಗಡಿರಸ್ತೆಯ ಪದ್ಮಶ್ರೀ ಪ್ರೌಢಶಾಲೆ, ಕಡಪಸ್ವಾಮಿ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 600 ಮಕ್ಕಳು ಜಾನಪದ ವೈಭವವನ್ನು ಕಟ್ಟಿಕೊಟ್ಟರು.

ಕಿತ್ತೂರು ರಾಣಿ ಚೆನ್ನಮ್ಮ ನೃತ್ಯರೂಪಕ, ಸಾಮೂಹಿಕ ಕವಾಯತು, ಕರುನಾಡ ನಿಸರ್ಗ ತಾಣಗಳು ಮತ್ತು ತ್ಯಾಗಮಯಿ ಕುವರರ ಚಿತ್ರಕಲಾ ಪ್ರದರ್ಶನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ವಿವಿಧ ಶಾಲಾ ಮಕ್ಕಳು ನಡೆಸಿಕೊಡುವುದರ ಮೂಲಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

Facebook Comments