ರಾಜ್ಯದಲ್ಲಿ ಪತ್ತೆಯಾಗಿದ್ದ ಮೊದಲ ಕೊರೊನಾ ಪ್ರಕರಣದ ಟೆಕ್ಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು, ಮಾ.20- ರಾಜ್ಯದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಅಮೆರಿಕದಿಂದ ಬಂದಿದ್ದ ಟೆಕ್ಕಿ ಈಗ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಮಾರ್ಚ್ ಮೊದಲ ವಾರದಲ್ಲಿ ಅಮೆರಿಕದಿಂದ ಬಂದಿದ್ದ ಟೆಕ್ಕಿಯಲ್ಲಿ ಕೊರೊನಾ ಕಾಣಿಸಿಕೊಂಡು ಆತಂಕ ಆರಂಭವಾಗಿತ್ತು.
ತಕ್ಷಣ ತಡ ಮಾಡದೆ ಅವರನ್ನು ರಾಜೀವ್ಗಾಂಧಿ ಆಸ್ಪತ್ರೆಯ ವಿಶೇಷ ಘಟಕಕ್ಕೆ ದಾಖಲು ಮಾಡಲಾಗಿತ್ತು. ಈ ವೇಳೆ ಅವರ ಪತ್ನಿಗೂ ಸೋಂಕು ತಗುಲಿತ್ತು. ಇಬ್ಬರನ್ನು ಸುಮಾರು ಎರಡು ವಾರಗಳ ಕಾಲ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಆಗ ಅವರು ಚೇತರಿಸಿಕೊಂಡಿದ್ದರು, ನಿನ್ನೆ ಮತ್ತೆ ಪರೀಕ್ಷೆ ಮಾಡಲಾಗಿತ್ತು. ವರದಿಯು ನೆಗೆಟೀವ್ ಎಂದು ಬಂದಿದೆ. ನಮಗೆ ಸಮಾಧಾನವಾಗಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಈ ದಂಪತಿಯನ್ನು ಇಂದು ಡಿಸ್ಚಾರ್ಜ್ ಮಾಡುತ್ತಿದ್ದು, ಅವರನ್ನು ಇನ್ನು 14 ದಿನಗಳ ಕಾಲ ಅವರ ಮನೆಯಲ್ಲೇ ಇರುವಂತೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಆದರೂ ನಮ್ಮ ಆರೋಗ್ಯ ಇಲಾಖೆ ಅವರ ಮೇಲೆ ನಿಗಾ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಈ ಸುದ್ದಿ ಸ್ವಲ್ಪ ಮಟ್ಟಿನ ಆಶಾಭಾವ ಮೂಡಿಸಿದೆ.