ಜೂನ್‍ನಲ್ಲಿ ಬೆಚ್ಚಿಬಿದ್ದ ಬೆಂಗಳೂರಿಗರು, 4197 ಮಂದಿಗೆ ಕೊರೊನಾ ಪಾಸಿಟಿವ್….!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.1- ಸಿಲಿಕಾನ್ ಸಿಟಿ ಜನರೇ ಎಚ್ಚರ..! ಮನೆ ಬಿಡುವ ಮುನ್ನ ಸ್ವಲ್ಪ ಯೋಚಿಸಿ. ಇಲ್ಲದಿದ್ದರೆ ಮಾರಿಯನ್ನು ನೀವೇ ಮನೆಗೆ ಆಹ್ವಾನಿಸಿದಂತಾಗುತ್ತದೆ.  ಏಕೆಂದರೆ ಕಳೆದ ಒಂದು ತಿಂಗಳಿನಲ್ಲಿ ಬರೋಬ್ಬರಿ 4197 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಜುಲೈನಲ್ಲಿ ಸೋಂಕಿತರ ಸಂಖ್ಯೆ 15 ಸಾವಿರ ದಾಟುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ನೀವು ಉದಾಸೀನವಾಗಿ ಓಡಾಡುವುದು, ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಕಾದಿದೆ ಗ್ರಹಚಾರ… ಕಳೆದ ಮಾರ್ಚ್‍ನಿಂದ ಮೇ ಅಂತ್ಯದವರೆಗೂ ಕೇವಲ 358 ಪ್ರಕರಣಗಳು ಮಾತ್ರ ದಾಖಲಾಗಿದ್ದವು.

ಲಾಕ್‍ಡೌನ್ ತೆರವಾದ ನಂತರ ಜೂನ್‍ನಲ್ಲಿ ಬರೋಬ್ಬರಿ 4197 ಪ್ರಕರಣಗಳು ದಾಖಲಾಗಿರುವುದರಿಂದ ಮನೆ ಬಿಡುವ ಮುನ್ನ ಯೋಚಿಸುವುದು ಒಳಿತು.

ಸ್ವಯಂ ಲಾಕ್‍ಡೌನ್: ನಗರದಲ್ಲಿ ಕೊರೊನಾತಂಕದ ಹಿನ್ನೆಲೆಯಲ್ಲಿ ಕೆಲ ಪ್ರದೇಶಗಳಲ್ಲಿ ಸ್ವಯಂ ಲಾಕ್‍ಡೌನ್ ಮಾಡಿಕೊಳ್ಳಲಾಗುತ್ತಿದೆ. ಬಸವನಗುಡಿಯಲ್ಲಿ ಒಂದು ವಾರ ಸ್ವಯಂ ಲಾಕ್‍ಡೌನ್ ಮಾಡಿಕೊಂಡಿದ್ದರೆ, ಮಲ್ಲೇಶ್ವರಂ ವರ್ತಕರು ತಮ್ಮ ಗ್ರಾಹಕರು ಹಾಗೂ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಇಡೀ ಮಲ್ಲೇಶ್ವರಂ ವಾಣಿಜ್ಯ ವಹಿವಾಟನ್ನು ಒಂದು ವಾರ ಕಾಲ ಸ್ತಬ್ಧಗೊಳಿಸಲು ತೀರ್ಮಾನಿಸಿದ್ದಾರೆ.

ಜುಲೈ 7ರ ವರೆಗೂ ಮಲ್ಲೇಶ್ವರಂನಲ್ಲಿ ಯಾವುದೇ ಅಂಗಡಿಗಳು, ವಾಣಿಜ್ಯ ಮಳಿಗೆಗಳನ್ನು ತೆರೆಯುವುದಿಲ್ಲ ಎಂದು ವರ್ತಕರ ಸಂಘದ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

# ಮತ್ತೊಂದು ಬಲಿ:
ನಗರದಲ್ಲಿ ಮಹಾಮಾರಿ ಅಟ್ಟಹಾಸ ಮುಂದುವರಿದಿದ್ದು, ಕೊರೊನಾಗೆ ಮತ್ತೊಂದು ಬಲಿಯಾಗಿದೆ.  ಕೊಟ್ಟಿಗೆಪಾಳ್ಯ ವಾರ್ಡ್‍ನ ಮಾಳಗಾಳ ಸಮೀಪ ಸೋಂಕಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಹೀಗಾಗಿ ಮಾಳಗಾಳ ಮುಖ್ಯರಸ್ತೆಯನ್ನು ಸೀಲ್‍ಡೌನ್ ಮಾಡಲಾಗಿದ್ದು, ಮೃತರ ಸಂಪರ್ಕದಲ್ಲಿದ್ದವರ ಪತ್ತೆಗೆ ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಿಬಿಎಂಪಿಗೂ ವಕ್ಕರಿಸಿದ ಕೊರೊನಾ: ಬಿಬಿಎಂಪಿ ಕೇಂದ್ರ ಕಚೇರಿಗೂ ಕೊರೊನಾ ಕಾಲಿಟ್ಟಿದ್ದು, ಮುಖ್ಯ ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿ ಹಾಗೂ ವಿಶೇಷ ಆಯುಕ್ತರ ಆಪ್ತ ಸಹಾಯಕರೊಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ಮುಖ್ಯ ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಇಡೀ ಕಚೇರಿಯನ್ನು ಸ್ಯಾನಿಟೈಜ್ ಮಾಡಿ ಸೀಲ್‍ಡೌನ್ ಮಾಡಲಾಗಿದೆ. ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರ ಆಪ್ತ ಸಹಾಯಕನಿಗೂ ಸೋಂಕು ಕಾಣಿಸಿಕೊಂಡಿರುವುದರಿಂದ ಆತನನ್ನು ನಿಗದಿತ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವಿಶೇಷ ಆಯುಕ್ತರನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.  ಬಿಬಿಎಂಪಿ ಕೇಂದ್ರ ಕಚೇರಿಗೆ ಕೊರೊನಾ ವಕ್ಕರಿಸಿರುವುದರಿಂದ ಪಾಲಿಕೆಯ ನೂರಾರು ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಿಸಿದೆ.

Facebook Comments