ಮಾರ್ಚ್ 2ರಂದು ಅಂಗನವಾಡಿ ಕಾರ್ಯಕರ್ತೆಯರ ಬೆಂಗಳೂರು ಚಲೋ
ಬೆಂಗಳೂರು, ಫೆ.23- ಪಿಂಚಣಿ ಸೌಲಭ್ಯ ಮತ್ತು ಸೇವೆ ಹಿರಿತನದ ಮೇಲೆ ಗೌರವ ಧನ ಹೆಚ್ಚುಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾರ್ಚ್ 2ರಂದು ಬೆಂಗಳೂರು ಚಲೋ ನಡುಸುತ್ತೇವೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ನ ರಾಜ್ಯ ಕಾರ್ಯದರ್ಶಿ ಎನ್.ಶಿವಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ಮೆರವಣಿಗೆಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟು ಶೇಷಾದ್ರಿ ರಸ್ತೆ ಮೂಲಕ ಫ್ರೀಡಂ ಪಾರ್ಕ್ ತಲುಪಿ ಸಮಾವೇಶ ನಡೆಸಿ ಬೇಡಿಕೆಗಳ ಮನವಿಯನ್ನು ಸಚಿವರಾದ ಶಶಿಕಲಾ ಜೊಲ್ಲೇ ಅವರಿಗೆ ಸಲ್ಲಿಸಲಾಗುವುದು ಎಂದರು.
ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪಿಂಚಣಿ ಸೌಲಭ್ಯವಿಲ್ಲದೆ ನಿವೃತ್ತಿಯಾದವರು ಬೀದಿಪಾಲಾಗಿದ್ದಾರೆ. ದೀರ್ಘಾವಧಿ ಸೇವೆ ಸಲ್ಲಿಸಿದವರು ಹಾಗೂ ಹೊಸದಾಗಿ ನೇಮಕಾತಿಯಾದವರಿಗೆ ಒಂದೇ ಮೊತ್ತದ ಗೌರವಧನ ನೀಡುತ್ತಿದ್ದು, ದೀರ್ಘ ಸೇವೆ ಸಲ್ಲಿಸಿದವರಿಗೆ ಅನ್ಯಾಯವಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ತಿಳಿಸಿದರು.