ಬೆಂಗಳೂರಿನ ರಸ್ತೆಗಳನ್ನು ದತ್ತು ಪಡೆಯಲು ಮುಂದೆ ಬಂದ 45 ಸಂಸ್ಥೆಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.9- ನಗರದ ಹಲವಾರು ರಸ್ತೆಗಳನ್ನು ದತ್ತು ಪಡೆಯಲು 45ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಮುಂದೆ ಬಂದಿವೆ. ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ರಸ್ತೆಗಳನ್ನು ದತ್ತು ನೀಡುವ ನಿರ್ಧಾರಕ್ಕೆ ಬಿಬಿಎಂಪಿ ಬಂದಿತ್ತು.ಈ ನಿರ್ಧಾರಕ್ಕೆ ಸಂಘ-ಸಂಸ್ಥೆಗಳಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಇದುವರೆಗೂ ರಸ್ತೆ ದತ್ತು ಪಡೆಯಲು 45 ಅರ್ಜಿಗಳು ಬಂದಿವೆ.

ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ರಸ್ತೆ ದತ್ತು ಪಡೆಯಲು ಮುಂದೆ ಬಂದಿರುವ ಸಂಘ -ಸಂಸ್ಥೆಗಳಿಗೆ ನಿರಾಪೇಕ್ಷಣಾ ಪತ್ರ ನೀಡಲಾಗುವುದು ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ. 45 ಅರ್ಜಿಗಳ ಜತೆಗೆ ಇನ್ನಿತರ ಹಲವಾರು ಸಂಸ್ಥೆಗಳು ದತ್ತು ಪಡೆಯಲು ಮುಂದೆ ಬಂದಿವೆ. ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಅನುಮತಿ ನೀಡಲಾಗುವುದು. ಒಂದು ವೇಳೆ ರಸ್ತೆ ನಿರ್ವಹಣೆಯಲ್ಲಿ ವಿಫಲವಾದರೆ ಅಂತಹ ಸಂಸ್ಥೆಗಳ ನಿರಾಪೇಕ್ಷಣಾ ಪತ್ರವನ್ನು ರದ್ದುಪಡಿಸಲಾಗುವುದು ಎಂದು ಅವರು ಹೇಳಿದರು.

ಸ್ಲಂಗಳಲ್ಲಿ ವಾಸಿಸುವ ಜನರಿಗೆ ಮಾಹಿತಿ ಕೊರತೆ ಇದೆ. ಅಲ್ಲಿನ ಜನತೆಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ಹೀಗಾಗಿ ದತ್ತು ಪಡೆಯಲು ಬರುವ ಸಂಸ್ಥೆಗಳಿಗೆ ಕೊಳಚೆ ಪ್ರದೇಶದ ರಸ್ತೆಗಳನ್ನೇ ದತ್ತು ಪಡೆಯುವಂತೆ ಪ್ರಚೋದಿಸಲಾಗುವುದು ಎಂದು ರಂದೀಪ್ ತಿಳಿಸಿದರು. ಕೊಳಚೆ ಪ್ರದೇಶಗಳಲ್ಲಿ ಜನ ಬೆಳಗಿನ ವೇಳೆ ಕಸ ನೀಡುವುದಿಲ್ಲ.

ಹೀಗಾಗಿ ಅಲ್ಲಿನ ಜನರಿಗೆ ರಾತ್ರಿ ವೇಳೆ ಕಸ ವಿಲೇವಾರಿಗೆ ಅವಕಾಶ ಮಾಡಿಕೊಡ ಲಾಗುವುದು. ನಗರದ ಮಧ್ಯಭಾಗದಲ್ಲಿರುವ ಪ್ರಮುಖ 10 ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಇಂಡಿಯಾ ರೇಸಿಂಗ್ ಟ್ರಸ್ಟ್ ಸಂಸ್ಥೆ ಹೆಚ್ಚುವರಿ ಪಾಳಿಗೆ ಒಂದು ತಂಡವನ್ನು ನೀಡಲು ಮುಂದೆ ಬಂದಿದೆ.

ಅದೇ ರೀತಿ ಆರ್‍ಎಂಜಡ್ ಬಿಲ್ಡರ್ಸ್ , ಉಜ್ಜೀವನ ಬ್ಯಾಂಕ್ ಸೇರಿದಂತೆ ಹಲವಾರು ಸಂಸ್ಥೆಗಳು ರಸ್ತೆ ದತ್ತು ಪಡೆಯಲು ಮನಸ್ಸು ಮಾಡಿದ್ದು, ಪ್ರತಿ ಶನಿವಾರ ರಸ್ತೆ ಸ್ವಚ್ಛತಾ ಕಾರ್ಯ ನಡೆಸಲು ಸಮ್ಮತಿಸಿವೆ ಎಂದರು. ರಸ್ತೆ ದತ್ತು ಪಡೆಯುವ ಸಂಸ್ಥೆಗಳು ಆಯಾ ರಸ್ತೆಗಳಲ್ಲಿ ತಮ್ಮ ಸಂಘ-ಸಂಸ್ಥೆಗಳ ನಾಮಫಲಕ ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ, ಯಾವುದೇ ವಾಣಿಜ್ಯ ಜಾಹೀರಾತು ನೀಡಲು ಅನುಮತಿ ನೀಡಿಲ್ಲ ಎಂದು ಅವರು ತಿಳಿಸಿದರು.

ರಸ್ತೆ ದತ್ತು ಪಡೆಯುವ ಸಂಸ್ಥೆಗಳು ಆ ರಸ್ತೆಯ ತ್ಯಾಜ್ಯ ವಿಲೇವಾರಿ, ಬೀದಿ ದೀಪ ನಿರ್ವಹಣೆ ಜತೆಗೆ ರಸ್ತೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಕಾರ್ಯಕ್ಕೆ ಬಿಬಿಎಂಪಿಯಿಂದ ಯಾವುದೇ ಹಣ ನೀಡುವುದಿಲ್ಲ. ಕನಿಷ್ಟ ತಿಂಗಳಿಗೊಂದು ಬಾರಿ ಯಾದರೂ ರಸ್ತೆ ಸ್ವಚ್ಛತೆ ಮಾಡಬೇಕು. ಪಾದಚಾರಿ ಮಾರ್ಗದ ಅಡೆತಡೆ ಸರಿಪಡಿಸಬೇಕು. ಒಣಗಿದ ಮರ, ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವುದು ಅತ್ಯವಶ್ಯಕ ಎಂದು ರಂದೀಪ್ ಸ್ಪಷ್ಟನೆ ನೀಡಿದರು.

Facebook Comments