ಕ್ಷಣ ಕ್ಷಣಕ್ಕೂ ಹೆಚ್ಚಿದ ಆತಂಕ, ಪ್ರಾಣ ಭೀತಿ, ಕೊರೊನಾ ಸೋಂಕಿಗೆ ಬೆಂಗಳೂರು ತಲ್ಲಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.20- ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರುತ್ತಿದ್ದು, ರಾಜಧಾನಿ ಬೆಂಗಳೂರು ತಲ್ಲಣಗೊಂಡಿದೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿವೆ. ಸ್ಮಶಾನಗಳ ಮುಂದೆ ಅಂತ್ಯ ಸಂಸ್ಕಾರಕ್ಕೆ ಆ್ಯಂಬುಲೆನ್ಸ್‍ಗಳು ಸಾಲಾಗಿ ನಿಂತಿವೆ. ಮೃತರ ಸಂಬಂಕರ ಆಕ್ರಂಧನ ಮುಗಿಲು ಮುಟ್ಟಿದೆ. ಅಂತ್ಯ ಸಂಸ್ಕಾರಕ್ಕಾಗಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದೆಡೆ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗದೆ ಪರದಾಟ ಮತ್ತೊಂದೆಡೆ ನಾನ್ ಕೋವಿಡ್ ಪೇಶೆಂಟ್‍ಗಳು ಚಿಕಿತ್ಸೆಗಾಗಿ ಅಲೆದಾಟ ದಿನನಿತ್ಯದ ಗೋಳಾಗಿದೆ. ಈ ನಡುವೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಂಟೆಗೆ ಐದರಂತೆ ಏರಿಕೆಯಾಗುತ್ತಿದೆ. ಸೋಂಕಿತರ ಸಂಖ್ಯೆಯೂ ಕೂಡ ಉಲ್ಬಣವಾಗುತ್ತಲೇ ಇದೆ. ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದೆ. ಆಮ್ಲಜನಕದ ಕೊರತೆ ಉಂಟಾಗಿದ್ದು, ಹಲವು ಆಸ್ಪತ್ರೆಗಳಲ್ಲಿ ರೋಗಿಗಳು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್‍ನ ಎರಡನೆ ಅಲೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕ್ಷಣ ಕ್ಷಣಕ್ಕೂ ಜೀವಭಯ ಎದುರಾಗುತ್ತಿದೆ. ಸೋಂಕಿಗೆ ಒಳಗಾಗಿ ನರಳಾಡುತ್ತಿರುವವರ ದೃಶ್ಯ ಜನತೆಯನ್ನು ಬೆಚ್ಚಿ ಬೀಳಿಸುತ್ತಿದೆ. ಹೆಮ್ಮಾರಿಯ ಹೊಡೆತಕ್ಕೆ ರಾಜಧಾನಿ ಬೆಂಗಳೂರು ತತ್ತರಿಸಿ ಹೋಗಿದೆ. ಯಾವ ಆಸ್ಪತ್ರೆಗಳಿಗೆ ಹೋದರೂ ಕೊರೊನಾ ಸೋಂಕಿತರಿಂದಲೇ ತುಂಬಿ ತುಳುಕುತ್ತಿವೆ. ಎಷ್ಟೇ ಪ್ರಭಾವವಿದ್ದರೂ, ಯಾರದ್ದೇ ರೆಕಮೆಂಡ್ ಇದ್ದರೂ ಕೂಡ ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿರುವವರಿಗೆ ಆಕ್ಸಿಜನ್ ಕೊರತೆ ಎದುರಾಗಿದೆ. ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಜೀವ ಹಿಡಿದುಕೊಂಡು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಸೋಂಕು ಹಿರಿಯ ನಾಗರಿಕರಿಗೆ, ಮಧುಮೇಹಿಗಳಿಗೆ ಹೆಚ್ಚಾಗಿ ಬರುತ್ತದೆ ಎಂದು ಊಹಿಸಲಾಗಿತ್ತು. ಆದರೆ, ಈಗ ಯುವ ಸಮುದಾಯಕ್ಕೂ ಹರಡಿದೆ. ಚಿಕಿತ್ಸೆಗೆ ಸ್ಪಂದಿಸುವಷ್ಟರಲ್ಲೇ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಿನ್ನೆ ಬೆಂಗಳೂರು ಒಂದರಲ್ಲೇ 96 ಮಂದಿ ಮೃತಪಟ್ಟಿದ್ದು, ಇಂದು ಮತ್ತೆಷ್ಟು ಮಂದಿ ಸಾವನ್ನಪ್ಪಲಿದ್ದಾರೆಯೋ ಎಂಬ ಆತಂಕ ಎದುರಾಗಿದೆ.

ನಗರದೆಲ್ಲೆಡೆ ಆ್ಯಂಬುಲೆನ್ಸ್‍ಗಳ ಸದ್ದೇ ಕೇಳಿಬರುತ್ತಿದೆ. ಯಾವ ಬಡಾವಣೆಗೆ ಹೋದರೂ, ಯಾವ ಗಲ್ಲಿಗೆ ಹೋದರೂ ಭಾವಪೂರ್ಣ ಶ್ರದ್ಧಾಂಜಲಿಗಳ ಫಲಕಗಳೇ ಕಾಣಸಿಗುತ್ತಿವೆ. ಆ ಮಟ್ಟಕ್ಕೆ ಪರಿಸ್ಥಿತಿ ತಲುಪಿದೆ. ಮಹಾಮಾರಿ ಆರ್ಭಟಕ್ಕೆ ಜೀವಗಳು ಬಲಿಯಾಗುತ್ತಿರುವುದು ಒಂದೆಡೆಯಾದರೆ, ಅಮಾಯಕರ ಜೀವಕ್ಕೆ ಯಾರು ಹೊಣೆ? ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬೀದಿ ಬೀದಿಗಳಲ್ಲಿ ಹೆಣಗಳು ಬೀಳಬೇಕಾಗುತ್ತದೆ. ಸಿಲಿಕಾನ್ ಸಿಟಿ ಸಾವಿನ ಸಿಟಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೊರೊನಾ ನಿಯಂತ್ರಣಕ್ಕೆ ಅಗತ್ಯವಾದ ಆಮ್ಲಜನಕದ ಬೇಡಿಕೆ ಐದು ಪಟ್ಟು ಹೆಚ್ಚಾಗಿದೆ. ಅದನ್ನು ಸರಬರಾಜು ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಆಸ್ಪತ್ರೆಗಳವರಿಗೂ ಈಗ ಆಕ್ಸಿಜನ್ ಬೇಕಾಗಿದೆ. ಅಷ್ಟು ಪ್ರಮಾಣದ ಆಕ್ಸಿಜನ್ ನಮ್ಮಲ್ಲಿ ಸಂಗ್ರಹವಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಸೋಂಕಿತರ ಸಂಖ್ಯೆ ಮಾತ್ರ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಲೇ ಇದೆ.

ಕೊರೊನಾ ಮೊದಲನೆ ಅಲೆ ಬಂದ ಸಂದರ್ಭದಲ್ಲಿ ಅದನ್ನು ನಿಯಂತ್ರಿಸುವಲ್ಲಿ ನಾವು ಯಶಸ್ವಿಯಾಗಿದ್ದೆವು. ಆದರೆ, ಎರಡನೆ ಅಲೆ ಆರ್ಭಟಕ್ಕೆ ತತ್ತರಿಸಿ ಹೋಗುತ್ತಿದ್ದೇವೆ. ಕೆಲವು ಆಸ್ಪತ್ರೆಗಳಲ್ಲಿ ಜಾಗವಿಲ್ಲದೆ ನೆಲದ ಮೇಲೆಯೇ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ ಕೆಲವೆಡೆ ಸಿಬ್ಬಂದಿಗಳು ಕೈ ಚೆಲ್ಲಿ ಕುಳಿತಿದ್ದಾರೆ. ಚಿತಾಗಾರಗಳಲ್ಲಂತೂ ತಡರಾತ್ರಿವರೆಗೂ ಶವ ಸಂಸ್ಕಾರ ಮಾಡಲಾಗುತ್ತಿದೆ. ಈ ಎಲ್ಲ ಪರಿಸ್ಥಿತಿಯನ್ನೂ ಗಮನಿಸಿದರೆ ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜನ ಎಚ್ಚೆತ್ತುಕೊಳ್ಳಿ… ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿ… ಕನಿಷ್ಟ ಸಾಮಾಜಿಕ ಅಂತರ ಕಾಪಾಡಿ… ಮಾಸ್ಕ್ ಧರಿಸಿ… ಸ್ಯಾನಿಟೈಜರ್ ಬಳಸಿ… ನೀವು ಸುರಕ್ಷಿತವಾಗಿರಿ… ಸಮಾಜದ ಸ್ವಾಸ್ಥ್ಯ ಕಾಪಾಡಿ… ಸಾವು-ನೋವುಗಳಿಂದ ದೂರವಿರಿ…

Facebook Comments