ಏಷ್ಯಾದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್’ಗೆ ಬೀಗ ಜಡಿಯಲು ಮುಂದಾದ ಬಿಲ್ದಪ್ ಸರ್ಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.6- ಏಷ್ಯಾದಲ್ಲೇ ಅತಿ ದೊಡ್ಡದೆಂದು ಬಿಂಬಿಸಲಾಗಿದ್ದ ಕೋವಿಡ್ ಆರೈಕೆ ಕೇಂದ್ರ ಆರಂಭವಾದ ಕೆಲವೇ ತಿಂಗಳಲ್ಲಿ ಮುಚ್ಚಲ್ಪಡುತ್ತಿದೆ. ಸಾರ್ವಜನಿಕರ ನೂರಾರು ಕೋಟಿ ರೂಪಾಯಿ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತೆ ಕರಗಿ ಹೋಗಿದೆ.

ಒಂದಷ್ಟು ದಿನಗಳ ಕಾಲ ಪ್ರಾಣ ಭಯ ಹುಟ್ಟಿಸಿ ಜನರನ್ನು ದಂಗು ಬಡಿಸಿದ ಕೊರೊನಾ ಸೋಂಕು ಇತ್ತೀಚೆಗೆ ಸಾಮಾನ್ಯ ಜ್ವರ ಎಂಬಂತಾಗುತ್ತಿದೆ. ಸರ್ಕಾರ ಸೋಂಕಿತರ ಲೆಕ್ಕ ಕೊಡುವುದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಹೊಡೆಯುವುದನ್ನು ಬಿಟ್ಟರೆ ಉಳಿದಂತೆ ಕೊರೊನಾ ಜನ ಸಾಮಾನ್ಯರ ನಡುವೆ ಹೆಚ್ಚಿನ ಪರಿಣಾಮ ಬೀರಿಲ್ಲ. ಎಲ್ಲಾ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿದೆ.

ಸಾಮಾಜಿಕ ಅಂತರ ಪಾಲಿಸಬೇಕು, ಮಾಸ್ಕ ಧರಿಸಬೇಕು ಎಂದು ಜಾಗೃತಿ ಮೂಡಿಸಲು ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಅದರೆ ಜನ ಈಗಾಗಲೇ ಸಾಕಷ್ಟು ಬೇಸತ್ತು ಹೋಗಿದ್ದಾರೆ. ಸರ್ಕಾರದ ಪ್ರಚಾರಗಳು ಜಾಹಿರಾತಿಗೆ ಸೀಮಿತವಾಗಿವೆ.

ಸೋಂಕಿತರ ಮನೆಯನ್ನು ಸೀಲ್ಡೌನ್ ಮಾಡಲಾಗುತ್ತಿತ್ತು. ಸೋಂಕು ಎಲ್ಲೇಡೆ ಹೆಚ್ಚಾದ ನಂತರ ಸೀಲ್ಡೌನ್ ಬಿಟ್ಟು ಮನೆಯ ಮುಂದೆ ಫಲಕ ತಗುಲಿ ಹಾಕುವ ಮಟ್ಟಿಗೆ ವ್ಯವಸ್ಥೆ ಸೀಮಿತವಾಗಿ ಉಳಿಯಿತು. ಈಗ ಆ ಫಲಕ ಕೂಡ ಹಾಕುತ್ತಿಲ್ಲ. ಪಕ್ಕದ ಮನೆಯಲ್ಲೇ ಸೋಂಕಿತರಿದ್ದರು ಯಾರಿಗೂ ಗೊತ್ತಾಗುತ್ತಿಲ್ಲ. ಅದಕ್ಕೆ ಪೂರಕವಾಗಿ ಹೋಂ ಕ್ವಾರಂಟೈನ್ಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ರೋಗ ಲಕ್ಷಣಗಳು ಅಪಾಯಕಾರಿಯಾಗಿಲ್ಲದಿದ್ದರೆ ಮನೆಯಲ್ಲೇ ಉಳಿದು ಚಿಕಿತ್ಸೆ ಪಡೆಯಬಹುದಾಗಿದೆ. ಹೀಗಾಗಿ ಕೋವಿಡ್ ಆರೈಕೆ ಕೇಂದ್ರಗಳಿಗೆ ಜನ ಬರುತ್ತಿಲ್ಲ. ಉಸಿರಾಟದ ಸಮಸ್ಯೆ ಹೆಚ್ಚಾಗಿ ಆರೋಗ್ಯ ಹದಗೆಟ್ಟಾಗ ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಜನರಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆರಂಭಿಸಿದ ಕೋವಿಡ್ ಹಾರೈಕೆ ಕೇಂದ್ರಗಳು ಒಂದೊಂದಾಗಿ ಮುಚ್ಚುತ್ತಿವೆ.

ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಿ 10 ಸಾವಿರ ಬೆಡ್‍ಗಳ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆರಂಭದ ಹಂತದಲ್ಲೇ ಒಂದಷ್ಟು ಸಮಸ್ಯೆಗಳು ಎದುರಾಗಿ ನಾನಾ ಕಸರತ್ತುಗಳ ಬಳಿಕ ಏಷ್ಯಾದಲ್ಲೇ ದೊಡ್ಡದೆಂದು ಬಿಂಬಿಸಲಾಗಿದ್ದ ಕೋವಿಡ್ ಕೇಂದ್ರ ಕಳೆದ ತಿಂಗಳು ಆರಂಭವಾಯಿತು.

ಜನರಿಗಾಗಿ ದಿನಕ್ಕೆ ಹತ್ತಾರು ಕೋಟಿ ರೂಪಾಯಿ ವೆಚ್ಚ ಮಾಡಿ ಈ ಕೇಂದ್ರವನ್ನು ಸರ್ಕಾರ ನಡೆಸುತ್ತಿತ್ತು. ಆದರೆ ಜನರೆ ಬರುತ್ತಿಲ್ಲವಾದ್ದರಿಂದ ಮುಚ್ಚಲು ನಿರ್ಧರಿಸಲಾಗಿದೆ. ಸೆ.15ರ ವೇಳೆಗೆ ಈ ಕೇಂದ್ರ ಸಂಪೂರ್ಣ ಬಂದ್ ಆಗಲಿದೆ.

ಆ.31ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕೇಂದ್ರದ ಬಗ್ಗೆ ಚರ್ಚೆಯಾಗಿದ್ದು, ಹತ್ತಾರು ಕೋಟಿ ಖರ್ಚು ಮಾಡಿ ಕೇಂದ್ರವನ್ನು ಉಳಿಸಿಕೊಂಡರೂ ಚಿಕಿತ್ಸೆಗೆ ಯಾರು ಬರುತ್ತಿಲ್ಲ. ಹೋಂ ಕ್ವಾರಂಟೈನ್‍ಗೆ ಅವಕಾಶ ಇರುವುದರಿಂದ ಜನ ಮನೆಯಲ್ಲೇ ಉಳಿದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಕೋವಿಡ್ ಕೇಂದ್ರವನ್ನು ಹಂತ ಹಂತವಾಗಿ ಮುಚ್ಚುವುದು ಸೂಕ್ತ ಎಂದು ನಿರ್ಧರಿಸಲಾಗಿದೆ.

ಅದರಂತೆ ಈಗಾಗಲೇ ಮುಚ್ಚುವಿಕೆ ಪ್ರಾರಂಭವಾಗಿದೆ. ಕೇಂದ್ರಕ್ಕಾಗಿ ಬಿಬಿಎಂಪಿಯಿಂದ ಖರೀದಿಸಲಾದ ಹಾಸಿಗೆಗಳು, ಮ್ಯಾಟ್ರೆಸ್, ಪೆಡಾಸ್ಟಾಲ್ ಫ್ಯಾನ್ಸ್, ಡಸ್ಟ್ ಬಿನ್, ಬಕೆಟ್ಸ್, ಮ್ಯಾಗ್ಸ್  ಹಾಗೂ ವಾಟರ್ ಡಿಸ್ಪೆನ್ಸಸರ್, ಪೀಠೋಪಕರಣಗಳನ್ನು ಸರ್ಕಾರಿ ಸ್ವಾಮ್ಯದ ವಸತಿ ಗೃಹಗಳಿಗೆ ಮತ್ತು ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಹಾಸ್ಟೆಲ್‍ಗೆ, ಜಿಕೆವಿಕೆಗೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗೆ ತಲಾ ಒಂದು ಸಾವಿರ ಪೀಠೋಪಕರಣಗಳನ್ನು, ಸಮಾಜಕಲ್ಯಾಣ ಇಲಾಖೆ ಮತ್ತು ಬುಡಕಟ್ಟು ಕಲ್ಯಾಣ ಹಾಸ್ಟೆಲ್‍ಗಳಿಗೆ 2500 ಪೀಠೋಪಕರಣಗಳನ್ನು ಉಳಿದ ಪೀಠೋಪಕರಣಗಳನ್ನು ಸರ್ಕಾರಿ ಆಸ್ಪತ್ರೆ ಮತ್ತು ಹಾಸ್ಟೆಲ್‍ಗಳಿಂದ ಬರುವ ಕೋರಿಕೆ ಆಧರಿಸಿ ನೀಡಲು ನಿರ್ಧರಿಸಲಾಗಿದೆ.

ತಕ್ಷಣವೇ ಕೇಂದ್ರವನ್ನು ಮುಚ್ಚ ಬಹುದಾದರೂ ಅಲ್ಲಿನ ನೋಡೆಲ್ ಅಧಿಕಾರಿಗಳು ಸೆ.15ರವರೆಗೂ ಕಾಲಾವಕಾಶ ನೀಡುವಂತೆ ಕೇಳಿದ್ದಾರೆ. ಹಾಗಾಗಿ ಹಂತ ಹಂತವಾಗಿ ಕೇಂದ್ರವನ್ನು ಮುಚ್ಚುತ್ತಿರುವುದಾಗಿ ಬಿಬಿಎಪಿ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

Facebook Comments