ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ಲಾಕ್‍ಡೌನ್ ಜಟಾಪಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26-ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಕುರಿತಂತೆ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಕೊರೊನಾ ಸೋಂಕು ತಡೆಗಟ್ಟಬೇಕಾದರೆ ಬೆಂಗಳೂರಿನಾದ್ಯಂತ ಪುನಃ ಲಾಕ್‍ಡೌನ್ ಹಾಗೂ ಕೆಲವು ಪ್ರದೇಶಗಳಲ್ಲಿ ಸೀಲ್‍ಡೌನ್ ಮಾಡಬೇಕೆಂಬ ಅಭಿಪ್ರಾಯನ್ನು ವ್ಯಕ್ತಪಡಿಸಿದರು.

ಇದಕ್ಕೆ ವ್ಯತಿರಿಕ್ತವಾಗಿ ಆಡಳಿತಾರೂಢ ಬಿಜೆಪಿಯ ಬಹುತೇಕ ಸಚಿವರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಆರ್ಥಿಕತೆ ನಷ್ಟ ನೆಪವೊಡ್ಡಿ ಲಾಕ್‍ಡೌನ್ ಜಾರಿ ಮಾಡಬಾರದೆಂದು ಪಟ್ಟು ಹಿಡಿದರು. ಒಂದು ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ತಿಳಿದುಬಂದಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಜನಪ್ರತಿನಿಧಿ ಸಭೆ ಕರೆಯಲಾಗಿತ್ತು.

ಸಭೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವರಾದ ವಿ.ಸೋಮಣ್ಣ, ಕೆ.ಗೋಪಾಲಯ್ಯ, ಡಾ.ಕೆ.ಸುಧಾಕರ್ ಹೊರತುಪಡಿಸದರೆ ರಾಜಧಾನಿ ಬೆಂಗಳೂರು ಪ್ರತಿನಿಧಿಸುವ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಭಾಗವಹಿಸಿದ್ದರು. ಬೆಂಗಳೂರು ಮಹಾನಗರದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.

ಕಳೆದ ಎರಡು ವಾರಗಳಿಂದ ಸೋಂಕು ಹಬ್ಬುತ್ತಿರುವುದು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿದೆ. ತಕ್ಷಣವೇ ನಗರದೆಲ್ಲೆಡೆ ಲಾಕ್‍ಡೌನ್ ಜಾರಿ ಮಾಡಬೇಕೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಒಕ್ಕೋರಲಿನ ಒತ್ತಡವನ್ನು ಸಿಎಂ ಮೇಲೆ ಹಾಕಿದರು. ಅದರಲ್ಲೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಸಭೆಯಲ್ಲಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನೀವು ವಿರೋಧ ಪಕ್ಷದವರನ್ನು ಸೌಜನ್ಯಕ್ಕಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ನಮ್ಮಿಂದ ಕನಿಷ್ಟಪಕ್ಷ ಒಂದು ಸಣ್ಣ ಸಲಹೆಯನ್ನೂ ಪಡೆಯುವುದಿಲ್ಲ. ಕೋವಿಡ್ ಸೋಂಕಿತರು ಬೀದಿಯಲ್ಲಿ ನಿಂತು ನಮಗೆ ಚಿಕಿತ್ಸೆ ಕೊಡಿ ಎಂದು ಅಂಗಲಾಚುತ್ತಿದ್ದಾರೆ.
ಯಾವ ಆಸ್ಪತ್ರೆಗಳಲ್ಲೂ ಹಾಸಿಗೆ ಇಲ್ಲ, ವೆಂಟಿಲೇಟರ್ ಕೊರತೆ ಇದೆ. ಕನಿಷ್ಠ ಪಕ್ಷ ಕುಡಿಯುವ ನೀರು, ಸ್ವಚ್ಛತೆ ಇಲ್ಲದೆ ಪರದಾಡುತ್ತಿದ್ದಾರೆ.

ಈಗ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ವಿರೋಧ ಪಕ್ಷದವರು ನಿಮಗೆ ನೆನಪಾದರೆ? ಮೊದಲು ಸೋಂಕಿತರನ್ನು ಬೇರೆ ಕಡೆ ದಾಖಲಿಸಿ ಅವರಿಗೆ ಚಿಕಿತ್ಸೆ ಕೊಡಿಸಬೇಕು.
ಸರ್ಕಾರ ಅಗತ್ಯ ಸಿದ್ದತೆಗಳನ್ನು ಕೈಗೊಂಡು ಲಾಕ್‍ಡೌನ್ ಜಾರಿ ಮಾಡಬೇಕೆಂದು ಒತ್ತಾಯಿಸಿದರು. ಡಿ.ಕೆ.ಸುರೇಶ್ ಅವರ ಆಗ್ರಹಕ್ಕೆ ಶಾಸಕರಾದ ಶಾಂತಿನಗರದ ಎನ್.ಎ.ಹ್ಯಾರೀಸ್, ಶಿವಾಜಿನಗರದ ರಿಜ್ವಾನ್ ಅರ್ಷದ್ ಮತ್ತಿತರರು ಸರ್ಕಾರದ ಮೇಲೆ ಮುಗಿಬಿದ್ದರು.

ಆದರೆ ಸಚಿವರಾದ ಆರ್. ಅಶೋಕ್, ಅಶ್ವಥ್ ನಾರಾಯಣ, ಶಾಸಕರು ಹಾಗೂ ಸಂಸದರು ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಮತ್ತೆ ಲಾಕ್‍ಡೌನ್ ಮಾಡುವ ಅಗತ್ಯವೇ ಇಲ್ಲ ಎಂದು ಪ್ರತಿಪಕ್ಷದ ಆರೋಪಕ್ಕೆ ತಿರುಗೇಟು ಕೊಟ್ಟರು. ರಾಜ್ಯ ಸರ್ಕಾರ ಎಲ್ಲಿಯೂ ಕೋವಿಡ್ ನಿರ್ವಹಣೆ ಮಾಡುವುದರಲ್ಲಿ ವಿಫಲವಾಗಿಲ್ಲ. ಇಡೀ ದೇಶದಲ್ಲೇ ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಏಕೈಕ ರಾಜ್ಯವೆಂದರೆ ಕರ್ನಾಟಕ.

ನಾವು ತೆಗೆದುಕೊಂಡ ಬಿಗಿಯಾದ ಕ್ರಮಗಳು ಹಾಗೂ ಸೋಂಕು ತಡೆಗಟ್ಟಲು ಅನುಸರಿಸಿದ ತಂತ್ರಜ್ಞಾನವನ್ನು ಸ್ವತಃ ಕೇಂದ್ರ ಸರ್ಕಾರವೇ ಪ್ರಶಂಸಿಸಿ ಬೇರೆ ರಾಜ್ಯಗಳು ಕರ್ನಾಟಕ ಮಾದರಿಯನ್ನು ಅನುಸರಿಸಬೇಕೆಂದು ಸಲಹೆ ಕೊಟ್ಟಿತ್ತು. ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಲಾಕ್‍ಡೌನ್‍ಗೆ ವಿಧಿಸಲಾಗಿದ್ದ ನಿಬಂಧನೆಗಳನ್ನು ಸರಳೀಕರಣ ಮಾಡಲಾಯಿತು.ಹೀಗಾಗಿ ಹೊರರಾಜ್ಯದವರು ಯಥೇಚ್ಛವಾಗಿ ಬೆಂಗಳೂರಿಗೆ ಆಗಮಿಸಿದರು. ಪರಿಣಾಮ ಸೋಂಕು ಪ್ರಕರಣಗಳು ಹೆಚ್ಚಾಗಿವೆ ಎಂದು ಅಶೋಕ್, ಅಶ್ವಥ್ ನಾರಾಯಣ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಸೋಂಕು ಪ್ರಕರಣಗಳು ಹೆಚ್ಚಾಗಿರುವ ಕಡೆ ಈಗಾಗಲೇ ವಾರ್ಡ್ ಮಟ್ಟದಲ್ಲಿ ಸೀಲ್‍ಡೌನ್ ಜೊತೆಗೆ ಲಾಕ್‍ಡೌನ್ ಮಾಡಲಾಗಿದೆ. ಮಾಸ್ಕ್‍ಗಳನ್ನು ಧರಿಸದಿದ್ದರೆ 200 ರೂ. ದಂಡ ಹಾಗೂ ಸೋಂಕು ಕಾಣಿಸಿಕೊಂಡವರು ಮಾಹಿತಿ ನೀಡದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಸೇರಿದಂತೆ ಅನೇಕ ರೀತಿಯ ಬಿಗಿ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇದಕ್ಕಿಂತ ಹೆಚ್ಚು ಇನ್ನೇನು ಮಾಡಲು ಸಾಧ್ಯ ಎಂದು ಸಚಿವರು ಸರ್ಕಾರದ ಪರವಾಗಿ ನಿಂತರು.

ಕೊನೆಗೆ ಮಧ್ಯಪ್ರವೇಶಿಸಿದ ಸಿಎಂ ಯಡಿಯೂರಪ್ಪ ಯಾವುದೇ ಕಾರಣಕ್ಕೂ ಮತ್ತೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಲಾಕ್‍ಡೌನ್ ಮಾಡುವುದಿಲ್ಲ. ಆರ್ಥಿಕ ನಿರ್ವಹಣೆ ಮಾಡುವುದು ನಮಗೆ ಸವಾಲಾಗಿ ಪರಿಣಮಿಸಿದೆ.

ಎರಡು ತಿಂಗಳು ಲಾಕ್‍ಡೌನ್ ಜಾರಿಯಲ್ಲಿದ್ದ ಪರಿಣಾಮ ಎಲ್ಲ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ದಗೊಂಡಿದ್ದವು. ಈಗ ಹಂತ ಹಂತವಾಗಿ ಸಹಜ ಸ್ಥಿತಿಗೆ ಬರುತ್ತಿವೆ. ತಜ್ಞರು ನೀಡುವ ವರದಿ ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಎಲ್ಲರಿಗೂ ತಿಳಿಸಿ ಸಭೆಯನ್ನು ಮುಗಿಸಿದರು.

Facebook Comments