ಅಂಕೆಮೀರಿ ಹರಡುತ್ತಿದೆ ಕೊರೊನಾ, ಇನ್ನು ಎಚ್ಛೆತ್ತುಕೊಳ್ಳದ ಕೇರ್ ಲೆಸ್ ಜನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.28- ಏನಾಗಿದೆ ಈ ಜನಕ್ಕೆ… ಮಹಾಮಾರಿ ಕೊರೊನಾ ಅಂಕೆ ಮೀರಿ ವ್ಯಾಪಿಸುತ್ತಿದೆ. ಕನಿಷ್ಟ ಮಾರ್ಗಸೂಚಿಗಳನ್ನು ಪಾಲಿಸದೆ ಜನ ತಮ್ಮ ಪಾಡಿಗೆ ತಾವು ಓಡಾಡುತ್ತ ಕೊರೊನಾ ಸೋಂಕು ವ್ಯಾಪಿಸಲು ಕಾರಣರಾಗುತ್ತಿದ್ದಾರೆ.

ಮಾಸ್ಕ್ ಬಳಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಸ್ಯಾನಿಟೈಜರ್ ಬಳಸದೆ ತಮ್ಮ ಪಾಡಿಗೆ ತಾವು ಓಡಾಡುತ್ತ ಈ ಸೋಂಕು ಹರಡಲು ಕಾರಣರಾಗುತ್ತಿದ್ದಾರೆ.

ಇಂದು ಬೆಳಗ್ಗೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಜನ ಹಣ್ಣು, ತರಕಾರಿ, ಮಾಂಸ ಕೊಳ್ಳಲು ಮುಗಿಬಿದ್ದ ಸನ್ನಿವೇಶಗಳನ್ನು ನೋಡಿದರೆ ಈ ರೋಗ ನಿಯಂತ್ರಣಕ್ಕೆ ಬರುವುದು ಕಂಡುಬರುವ ಯಾವುದೇ ಲಕ್ಷಣಗಳು ಇದ್ದಂತಿರಲಿಲ್ಲ.

ದೇಶಾದ್ಯಂತ ಸೋಂಕಿತರ ಸಂಖ್ಯೆ 20 ಸಾವಿರ ಮೇಲ್ಪಟ್ಟು ಏರುತ್ತಿದೆ. ಕರ್ನಾಟಕ ರಾಜ್ಯದಲ್ಲಿ ದಿನಕ್ಕೆ ಒಂದು ಸಾವಿರ ಗಡಿ ದಾಟುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ 600ರ ಸಮೀಪ ಬಂದಿದೆ. ಸಾವಿನ ಗ್ರಾಫ್ ಕೂಡ ಏರಿಕೆಯಾಗುತ್ತಿದೆ. ಹೇಗೂ ಲಾಕ್‍ಡೌನ್ ತೆರವಾಗಿದೆ ಎಂದು ಜನಸಾಮಾನ್ಯರು ತಮ್ಮಷ್ಟಕ್ಕೆ ತಾವು ಜೀವನ ಸಾಗಿಸುತ್ತಿದ್ದಾರೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಾಗಲಿ, ಮಾಸ್ಕ್ ಧರಿಸುವುದಾಗಲಿ, ಸ್ಯಾನಿಟೈಜರ್ ಹಾಕಿಕೊಳ್ಳುವುದಾಗಲಿ ಯಾವುದನ್ನೂ ಮಾಡದೆ ಓಡಾಡಿಕೊಂಡಿರುವುದು ರೋಗ ಉಲ್ಬಣಕ್ಕೆ ಕಾರಣವಾಗುತ್ತದೆ.

ಇಂದು ಯಶವಂತಪುರ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ಇಂತಹ ಸನ್ನಿವೇಶಗಳು ಕಂಡುಬಂದವು. ಬೆಳಗ್ಗೆ ತರಕಾರಿ ಮಾರುಕಟ್ಟೆ, ಮಾಂಸ ಮಾರುಕಟ್ಟೆಯಲ್ಲಿ ಜನ ಮುಗಿಬಿದ್ದು ಕೊಳ್ಳಲು ಮುಂದಾದರು.

ಮಾಸ್ಕ್ ಇರಲಿ, ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮಾಡಲಿಲ್ಲ. ತಮ್ಮ ವ್ಯಾಪಾರ-ವಹಿವಾಟು ನಡೆಸುವುದೇ ಮುಖ್ಯವಾಗಿತ್ತು. ಸೋಂಕು ಈ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಸೋಂಕಿನಿಂದ ಸಾಯುವವರ ಪ್ರಮಾಣವೂ ಹೆಚ್ಚಾಗುತ್ತಿದೆ.

ಹೀಗಿದ್ದರೂ ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೇನೋ ಎಂದು ಜನ ವರ್ತಿಸುತ್ತಿದ್ದರು. ಇದು ಯಶವಂತಪುರ ಮಾರುಕಟ್ಟೆ ಒಂದರ ಚಿತ್ರಣವಲ್ಲ, ಬಹುತೇಕ ಮಾರುಕಟ್ಟೆಯಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ. ಹೀಗಾಗಿಯೇ ಬೆಂಗಳೂರಿನ ಕೆಆರ್ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿದೆ.

ಜನ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಅಪಾಯವನ್ನು ಮೈಮೇಲೆ ಹಾಕಿಕೊಳ್ಳಬೇಕಾಗುತ್ತದೆ. ಸರ್ಕಾರ ಏನು ಅಷ್ಟೊಂದು ಕಠಿಣ ನಿಯಮಗಳನ್ನು ಜನರ ಮೇಲೆ ವಿಧಿಸಿಲ್ಲ.

ಕನಿಷ್ಟ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಮ್ಮ ಕೈಗಳನ್ನು ತೊಳೆದುಕೊಳ್ಳಿ, ಮುಖಕ್ಕೊಂದು ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದೆ. ಮನೆಯಲ್ಲಿರುವ ಹಿರಿಯರು, ಮಕ್ಕಳನ್ನು ಹುಷಾರಾಗಿ ನೋಡಿಕೊಳ್ಳಿ ಎಂದು ತಿಳಿಸಿದೆ.

ಆದರೆ, ನಾವು ಮಾಡುತ್ತಿರುವುದೇನು? ಮಾರುಕಟ್ಟೆಗೆ ಹಿರಿಯರನ್ನೇ ಕಳುಹಿಸುತ್ತೇವೆ. ಎಲ್ಲಿಗಾದರೂ ಹೋಗುವಾಗ ಜತೆಯಲ್ಲಿ ಮಕ್ಕಳನ್ನೂ ಕರೆದುಕೊಂಡು ಹೋಗುತ್ತೇವೆ. ಮತ್ತೆ ಏನಾದರೂ ಹೆಚ್ಚುಕಡಿಮೆಯಾದರೆ ಸರ್ಕಾರದ ವ್ಯವಸ್ಥೆಯನ್ನು ದೂಷಿಸುತ್ತೇವೆ.

ಸಾಂಕ್ರಾಮಿಕ ರೋಗವಾಗಿರುವ ಕೊರೊನಾಗೆ ಇನ್ನೂ ಯಾವುದೇ ಲಸಿಕೆ ಲಭ್ಯವಾಗಿಲ್ಲ. ಹೀಗಿರುವಾಗ ನಾವು ಅದನ್ನು ನಿಯಂತ್ರಿಸಬೇಕು. ಅದು ನಮ್ಮ ಬಳಿ ಸುಳಿಯದಂತೆ ಎಚ್ಚರಿಕೆ ವಹಿಸಬೇಕಾಗಿರುವುದೊಂದೇ ಮಾರ್ಗ.

ಎಲ್ಲಿಯವರೆಗೆ ಅದು ನಮ್ಮೊಂದಿಗಿರುತ್ತದೋ ಅಲ್ಲಿಯವರೆಗೆ ನಾವು ಮುನ್ನೆಚ್ಚರಿಕೆ ಕ್ರಮ ಅನುಸರಿಸುತ್ತಾ ಸಾಗಬೇಕು. ಹಿರಿಯರು ಮತ್ತು ಮಕ್ಕಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು.

ಮಾರುಕಟ್ಟೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಹೋಗುವಾಗ ಮನೆಯಿಂದ ಒಬ್ಬರೇ ಹೋಗಿ ತೆಗೆದುಕೊಂಡು ಬರಬೇಕು. ಇದನ್ನು ನೂರಾರು ಬಾರಿ ಹೇಳಲಾಗಿದೆ. ಆದರೆ, ಪ್ರತಿ ಬಾರಿಯೂ ಮಾರುಕಟ್ಟೆಗಳಲ್ಲಿ ಜನಜಾತ್ರೆ ನಡೆಯುತ್ತಿರುತ್ತದೆ.

ಸರ್ಕಾರದ ಯಾವೊಂದೂ ನಿಯಮಗಳನ್ನೂ ಜನ ಪಾಲನೆ ಮಾಡಲಿಲ್ಲವೆಂದರೆ ಹೇಗೆ? ರೋಗ ನಮ್ಮ ಮನೆ ಬಾಗಿಲಿಗೆ ಬಂದಾಗ ಮಾತ್ರ ನಾವು ಎಚ್ಚೆತ್ತುಕೊಳ್ಳಬೇಕೆ? ಸಾವು-ನೋವು ಆದಾಗ ಮಾತ್ರ ನಾವು ಸಂಕಟ ಅನುಭವಿಸಬೇಕು.

ಮುನ್ನೆಚ್ಚರಿಕೆ ಕ್ರಮ ಅನುಸರಿಸಬಾರದೆ? ಈ ಕ್ರಮಗಳನ್ನು ನಾವು ವಹಿಸದಿದ್ದರೆ ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ. ನಮ್ಮಿಂದ ಬೇರೆಯವರಿಗೂ ನೋವು ಕೊಡುತ್ತೇವೆ. ಎಚ್ಚರ..!!

Facebook Comments