5 ತಿಂಗಳ ಬಳಿಕ ನಮ್ಮ ಮೆಟ್ರೋ ಸೇವೆ ಆರಂಭ, ಸಂಚಾರಕ್ಕೆ ಪ್ರಯಾಣಿಕರ ಹಿಂದೇಟು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.7-ಸರಿಸುಮಾರು 5 ತಿಂಗಳ ನಂತರ ಬಹುನಿರೀಕ್ಷೆಯೊಂದಿಗೆ ನಮ್ಮ ಮೆಟ್ರೋ ರೈಲು ಸಂಚಾರ ಇಂದಿನಿಂದ ಆರಂಭವಾದರೂ ಮೊದಲ ದಿನವೇ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೋವಿಡ್-19 ಸೋಂಕು ಮಹಾನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಮೆಟ್ರೋ ರೈಲಿನಲ್ಲಿ ಸಂಚರಿಸಲು ಪ್ರಯಾಣಿಕರು ಹಿಂದೇಟು ಹಾಕಿದ್ದು ಕಂಡುಬಂತು. ಹೀಗಾಗಿ ಮೊದಲ ದಿನ ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು.

ಇಂದು ಬೆಳಗ್ಗೆ 7.30ಕ್ಕೆ ಬೈಯ್ಯಪ್ಪನಹಳ್ಳಿಯಿಂದ ಮೈಸೂರುರಸ್ತೆ ಮಾರ್ಗದ ನೇರಳೆ ಮಾರ್ಗದಲ್ಲಿ ಮಾತ್ರ ಮೆಟ್ರೋ ಸಂಚಾರ ಆರಂಭಿಸಿತು. ಆದರೆ ರೈಲಿನಲ್ಲಿ ಕೆಲವೇ ಕೆಲವು ಪ್ರಯಾಣಿಕರು ಇದ್ದ ದೃಶ್ಯ ಕಂಡುಬಂದಿತು.  ಮೊದಲ ಮೆಟ್ರೋ ಸಂಚಾರ ಆರಂಭಕ್ಕೂ ಮುನ್ನ ಪ್ರಯಾಣಿಕರನ್ನು ಮೆಟ್ರೋ ಸ್ಟೇಷನ್ ಒಳಗೆ ಸಿಬ್ಬಂದಿ ಕಳುಹಿಸಿದರು. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿತ್ತು.

ರೈಲಿನಲ್ಲಿ ಸಂಚರಿಸಲು ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡದ್ದು ಪ್ರಯಾಣಿಕರ ವಿರಳತೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬ ಪ್ರಯಾಣಿಕರಿಗೆ ಹರಡದಂತೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಅಧಿಕಾರಿಗಳು ಬಿಗಿಯಾದ ಕಟ್ಟುಪಾಡುಗಳನ್ನು ವಿಧಿಸಿದ್ದರು.

ಈ ನಿಯಮಗಳು ಏನೇ ಇದ್ದರೂ ಸಾರ್ವಜನಿಕರಲ್ಲಿ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬಬಹುದೆಂಬ ಕಾರಣಕ್ಕಾಗಿಯೇ ಮೆಟ್ರೊ ರೈಲಿನಿಂದ ಬಹುತೇಕರು ದೂರ ಉಳಿದಿದ್ದರು. ಪರಿಣಾಮ ಅನೇಕ ಭೋಗಿಗಳು ಖಾಲಿಯಾಗಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ಕೋವಿಡ್ ಕಾರಣದಿಂದ ಮಾರ್ಚ್ 22 ರಿಂದ ಮೆಟ್ರೋ ಸೇವೆ ರದ್ದುಪಡಿಸಲಾಗಿತ್ತು. ಈಗ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಇಂದಿನಿಂದ ಹಂತ ಹಂತವಾಗಿ ಮೆಟ್ರೋ ಸಂಚಾರ ಆರಂಭವಾಗಿದೆ. ಮೊದಲು ಬೈಯಪ್ಪನಹಳ್ಳಿಯಿಂದ ಮೈಸೂರು ರೋಡ್‍ನ ನೇರಳ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ.  ಈ ನೇರಳೆ ಮಾರ್ಗದಲ್ಲಿ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಆರಂಭಿಸಿದೆ. 9ನೇ ತಾರೀಖಿನಿಂದ ಹಸಿರು ಮಾರ್ಗದ ಅಂದರೆ ಯಲಚೇನಹಳ್ಳಿಯಿಂದ ನಾಗಸಂದ್ರದ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.

ಅಷ್ಟೇ ಅಲ್ಲದೇ ಬೆಳಗ್ಗೆ 3 ಗಂಟೆ, ಸಂಜೆ 3 ಗಂಟೆ ಕಾಲ ಮಾತ್ರ ಮೆಟ್ರೋ ಓಡಾಡಲಿದೆ. ಬೆಳಗ್ಗೆ 8 ಗಂಟೆಯಿಂದ 11, ಸಂಜೆ 4.30 ರಿಂದ ರಾತ್ರಿ 7.30 ವರೆಗೆ ಮೆಟ್ರೋ ಸಂಚಾರವಿದೆ. ಸೆಪ್ಟೆಂಬರ್ 11ರಿಂದ ಎಂದಿನಂತೆ ಮೆಟ್ರೋ ಸಂಚಾರ ಇರುತ್ತದೆ.

ಕೇಂದ್ರ ಸರ್ಕಾರದ ಅನ್ ಲಾಕ್ 4.9 ಮಾರ್ಗಸೂಚಿಯಡಿ ಬೆಂಗಳೂರಿನಲ್ಲಿ ನಮೆಟ್ರೊ ಸೇವೆಯನ್ನು ಆರಂಭಿಕ ಹಂತದಲ್ಲಿ ನೇರಳೆ ಮಾರ್ಗದಲ್ಲಿ ಮಾತ್ರ ಆರಂಭಿಸಲಾಗಿದೆ. ಬೈಯಪ್ಪನಹಳ್ಳಿಯಿಂದ ಬೆಳಗ್ಗೆ 8 ಗಂಟೆಗೆ ಮೆಟ್ರೊ ಸಂಚಾರ ಆರಂಭಿಸಿದಾಗ 10ರಿಂದ 12 ಮಂದಿ ಪ್ರಯಾಣಿಕರಿದ್ದರು ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ ಎಲ್ ಯಶವಂತ್ ಚವಾಣ್ ತಿಳಿಸಿದ್ದಾರೆ.

# ಮೆಟ್ರೋ ಸಂಚಾರಕ್ಕೆ ನಿಯಮ
* ಆರೋಗ್ಯ ಸೇತು ಆಪ್ ಇದ್ದರೆ ಮಾತ್ರ ಪ್ರವೇಶ
* ಕ್ಯಾಶ್‍ಲೆಸ್ ಸಂಚಾರಕ್ಕೆ ಮಾತ್ರ ಅವಕಾಶ
* ಮೆಟ್ರೋ ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಮೆಟ್ರೋಗೆ ಅನುಮತಿ
* ಟೋಕನ್ ಬಳಸಿ ಸಂಚಾರಕ್ಕೆ ಅವಕಾಶ ಇಲ್ಲ
* ಸ್ಯಾನಿಟೈಸರ್ ಬಳಕೆ, ಉಷ್ಣಾಂಶ ಚೆಕ್ ಆಗದೆ ಪ್ರವೇಶವಿಲ್ಲ
* ಸ್ಟೇಷನ್‍ನಲ್ಲಿ ಪ್ರಯಾಣಿಕರ ನಿಲುಗಡೆಗೆ ಬಾಕ್ಸ್
* ಪ್ರವೇಶ ದ್ವಾರ, ನಿರ್ಗಮನ, ಪ್ಲಾಟ್ ಫಾರ್ಮ್‍ನಲ್ಲಿ ಹಳದಿ ಗುರುತಿನ ಜಾಗದಲ್ಲಿ ನಿಲ್ಲಬೇಕು
* ಎಸ್ಕೆಲೇಟರ್ ಬಳಸುವ ಪ್ರಯಾಣಿಕರು ಒಂದು ಮೆಟ್ಟಿಲು ಅಂತರ ಕಾಪಾಡಬೇಕು
* ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು.
* 50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ
* 6 ಬೋಗಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ
* ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಮಾತ್ರ ಕೂರಬೇಕು
* ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ ನಿಲ್ದಾಣಗಳಲ್ಲಿ ನಿಲ್ಲಿಸಲ್ಲ
* 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಇದ್ದರೆ ಮಾತ್ರ ಸಂಚಾರ.

Facebook Comments