ಬೆಂಗಳೂರಿನಲ್ಲಿ ಕೊರೋನಾ ಬ್ಲಾಸ್ಟ್ : ಗಂಟುಮೂಟೆ ಸಮೇತ ಊರುಗಳತ್ತ ಹೋರಾಟ ಜನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.4-ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಬಾಂಬ್ ಬ್ಲಾಸ್ಟ್‌ಗೆ ಭಯಭೀತರಾಗಿರುವ ಜನ ನಗರ ತೊರೆದು ಗುಳೇ ಹೋಗಲು ಆರಂಭಿಸಿದ್ದಾರೆ. ತಮ್ಮ ಗಂಟುಮೂಟೆ ಕಟ್ಟಿಕೊಂಡು ಊರುಗಳಿಗೆ ತೆರಳುತ್ತಿರುವ ದೃಶ್ಯ ಕಂಡುಬಂದಿದೆ.

ಕೊರೊನಾ ನಿಯಂತ್ರಣಕ್ಕಾಗಿ ನಾಳೆ ಸಂಪೂರ್ಣ ಲಾಕ್‍ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಏನಾಗುತ್ತೋ ಏನೋ ಎಂಬ ಭಯ ಒಂದೆಡೆಯಾದರೆ, ಸಿಲಿಕಾನ್ ಸಿಟಿಯಲ್ಲಿ ನಿರಂತರವಾಗಿ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಏರುತ್ತಿರುವುದರಿಂದ ಜನ ನಗರ ಬಿಟ್ಟು ತೆರಳಲು ಆರಂಭಿಸಿದ್ದಾರೆ.

ನಾಳೆ ಸಂಪೂರ್ಣ ಕಫ್ರ್ಯೂ ಮಾದರಿಯ ಲಾಕ್‍ಡೌನ್ ಇರುವುದರಿಂದ ಊರುಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಇಂದೆಯೇ ತಮ್ಮ ತಮ್ಮ ಊರುಗಳಿಗೆ ಲಗೇಜ್‍ಗಳೊಂದಿಗೆ ತೆರಳುತ್ತಿದ್ದಾರೆ.  ಕೆಲವರು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಕುಟುಂಬದೊಂದಿಗೆ ಹೋಗುತ್ತಿರುವ ದೃಶ್ಯಗಳು ಕಂಡುಬಂದವು.

ಕಳೆದ ಮಾ.25ರಂದು ಲಾಕ್‍ಡೌನ್ ಘೋಷಣೆಯಾದಾಗ ಕೊರೊನಾ ಸೋಂಕು ಇಂದಲ್ಲ ನಾಳೆ ನಿವಾರಣೆಯಾಗುತ್ತದೆ. ಮತ್ತೆ ನಗರದಲ್ಲಿ ಬದುಕು ಕಟ್ಟಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದರು.

ಲಾಕ್‍ಡೌನ್ ತೆರವಾಗುತ್ತಿದ್ದಂತೆ ನಗರಗಳತ್ತ ಮುಖ ಮಾಡಿದ್ದರು. ತಮ್ಮ ಮನೆಗಳಲ್ಲಿ ನೆಲೆಸಿ ಕೆಲಸಗಳನ್ನು ಮಾಡಲು ಶುರುವಿಟ್ಟುಕೊಂಡಿದ್ದರು. ಆದರೆ ನಗರದಲ್ಲಿ ಕೊರೊನಾ ನಿಯಂತ್ರಣಕೆ ಬರಲಿಲ್ಲ. ದಿನೇ ದಿನೇ ಸೊಂಕು ಜಾಸ್ತಿಯಗುತ್ತಲೇ ಬಂದಿದೆ. ಪ್ರತಿ ದಿನ ಸೋಂಕಿತರ ಸಂಖ್ಯೆ ಸಾವಿರದ ಮಟ್ಟದಲ್ಲಿ ಏರುತಾ ಸಾಗಿದೆ. ಗುಣಮುಖವಾಗಿರುವವ ಸಂಖ್ಯೆ ಕ್ಷೀಣಿಸುತ್ತಾ ಬಂತು.

ಆಸ್ಪತ್ರೆಯಲ್ಲಿ ಸೋಂಕಿತರನ್ನು ದಾಖಲಿಸಿಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಬೆಂಗಳೂರಿನ ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಸೀಲ್‍ಡೌನ್ ಮಾಡಲಾಯಿತು. ಬದುಕು ಪುನರ್ ನಿರ್ಮಾಣ ಮಾಡಿಕೊಳ್ಳುವವರ ಕನಸು ನುಚ್ಚುನೂರಾಯಿತು.

ದಿನೇ ದಿನೇ ಕ್ಷಣ ಕ್ಷಣ ಆತಂಕ ಎದುರಾಯಿತು. ಏನೋ ತಮ್ಮ ಮಕ್ಕಳ ಪರೀಕ್ಷೆ ಮುಗಿದರೆ ಸಾಕು ಎಂಬ ಆತಂಕ ಮತ್ತು ಧಾವಂತದಲ್ಲಿದ್ದರು. ಇದು ಮುಗಿಯುತ್ತಿದ್ದಂತೆ ತಮ್ಮ ಸಾಮಾನು ಸರಂಜಾಮುಗಳ ಸಹಿತ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಯಿತು.

ಇತ್ತ ಯಾವುದೇ ಕ್ರಮ ಕೈಗೊಂಡರೂ ಸೋಂಕು ನಿಯಂತ್ರಣಕ್ಕೆ ಬಾರದಾಯಿತು. ಸರ್ಕಾರ ಅನಿವಾರ್ಯವಾಗಿ ವೀಕೆಂಡ್ ಲಾಕ್‍ಡೌನ್‍ಗೆ ಮುಂದಾಯಿತು. ಇನ್ನೂ ಮುಂದೆ ಸರ್ಕಾರ ಮತ್ತಾವ ಕ್ರಮಗಳ ಕೈಗೊಳ್ಳಲಿದೆಯೋ ಎಂಬ ಆತಂಕ ಜನರಲ್ಲಿ ಶುರುವಾಯಿತು. ಹಾಗಾಗಿ ಅನಿವಾರ್ಯವಾಗಿ ಜನ ತಮ್ಮ ಊರುಗಳತ್ತ ಗುಳೇ ಹೋಗಲು ಪ್ರಾರಂಭಿಸಿದ್ದಾರೆ.

ಗ್ರಾಮಗಳಿಗೆ ಹೋದರೆ ಅಲ್ಲೇನು ಪರಿಸ್ಥಿತಿ ಆಶಾದಾಯಕವಾಗಿಲ್ಲ. ಈಗಾಗಲೇ ಕೊರೊನಾ ಗ್ರಾಮೀಣ ಪ್ರದೇಶಗಳಿಗೂ ಒಕ್ಕರಿಸಿದೆ. ತಾಲ್ಲೂಕು, ಹೋಬಳಿ, ಹಳ್ಳಿಗಳಲ್ಲೂ ಸೋಂಕಿತರ ಸಂಖ್ಯೆ ತೀವ್ರವಾಗಿದೆ. ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿನಿಂದ ಸಾವನ್ನಪ್ಪಿರುವವ ಸಂಖ್ಯೆಯೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆ. ಅಲ್ಲೂ ಕೂಡ ಭಯದ ವಾತಾವರಣವಿದೆ. ನಗರ ಪ್ರದೇಶದಿಂದ ಹಳ್ಳಿಗೆ ಹೋಗುವವರನ್ನು ಅಷ್ಟೂ ಸುಲಭವಾಗಿ ಬಿಟ್ಟುಕೊಳ್ಳುವುದಿಲ್ಲ. ಏನೂ ಮಾಡಲು ಸಾಧ್ಯವಿಲ್ಲ. ಜೀವದೊಂದಿಗೆ ಜೀವನವನ್ನು ಮಾಡಬೇಕಿದೆ. ಇಲ್ಲಿರಲಾರದೆ ಅಲ್ಲಿಯೂ ಹೋಗಲಾರದೆ ಪರಿಸ್ಥಿತಿ ನಿರ್ಮಾಣವಾಗಿದೆ.

ಆತಂಕ, ದುಗುಡ, ಧಾವಂತದೊಂದಿಗೆ ಜನ ತಮ್ಮ ಊರುಗಳಿಗೆ ಹೊರಟಿದ್ದಾರೆ. ಪ್ರತಿದಿನ ಭಯದಿಂದ ಸಾಯುವುದಕ್ಕಿಂತ ನಮ್ಮ ಹಳ್ಳಿಗಳಿಗೆ ಹೋಗಿ ಜೀವನ ಮಾಡುವುದೇ ಲೇಸು ಎಂದು ತಮ್ಮ ಮಕ್ಕಳು, ಮರಿಗಳೊಂದಿಗೆ ಲಗೇಜು ತುಂಬಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಕೆಲಸ ಸಿಗದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಗುಳೇ ಹೋಗುವುದು ಸಾಮಾನ್ಯವಾಗಿತ್ತು. ಆದರೆ ಈಗ ಜೀವ ಭಯದಿಂದ ಗುಳೇ ಹೊರಟ್ಟಿದ್ದಾರೆ. ಸೋಂಕಿದ್ದವರು ಹಳ್ಳಿ ಕಡೆ ಹೋದರೆ ಸೋಂಕು ಮತ್ತಷ್ಟು ವ್ಯಾಪಿಸುವುದಿಲ್ಲವೇ? ಸೋಂಕು ನಿಯಂತ್ರಣಕ್ಕೆ ಸರ್ಕಾರ ಲಾಕ್‍ಡೌನ್ ಕ್ರಮಕ್ಕೆ ಮುಂದಾಗಿದೆ. ಆದರೆ ಸಾಮೂಹಿಕವಾಗಿ ಈ ರೀತಿ ಜನ ಹೊರಟರೆ ಸರ್ಕಾರ ಈ ಕ್ರಮ ಫಲಪ್ರದವಾಗುತ್ತದೆಯೇ…?

Facebook Comments