ಬೆಂಗಳೂರಿನಲ್ಲಿ ಎರಡು ಬರ್ಬರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.3- ನಗರದಲ್ಲಿ ಇಬ್ಬರ ಕೊಲೆ ನಡೆದಿದೆ. ಬಾಣಸವಾಡಿಯಲ್ಲಿ ವೃದ್ದೆ ಹಾಗೂ ಪರಪ್ಪನ ಅಗ್ರಹಾರ ಬಳಿ ಕಾರ್ಪೆಂಟರ್‍ನನ್ನು ಬರ್ಬರವಾಗಿ ಕೊಲೆ ಮಾಡಿ ಕೆರೆಗೆ ಎಸೆಯಲಾಗಿದೆ.

# ವೃದ್ಧೆ ಕೊಲೆ:
ಹಾಡ ಹಗಲೇ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ವೃದ್ಧೆಯನ್ನು ಕೊಲೆ ಮಾಡಿ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್‍ಎಸ್ ಪಾಳ್ಯದ ಐಒಸಿ ಸರ್ಕಲ್ ಸಮೀಪದ ನಿವಾಸಿ ಕಾಂತಮ್ಮ (73) ಕೊಲೆಯಾದ ವೃದ್ಧೆ. ಈ ಮನೆಯಲ್ಲಿ ಕಾಂತಮ್ಮ ಮತ್ತು ಮಗಳು ಮಂಜುಳಾ ವಾಸವಾಗಿದ್ದರು. ಮಕ್ಕಳು ಬೇರೆಕಡೆ ನೆಲೆಸಿದ್ದಾರೆ.  ನಿನ್ನೆ ಮಗಳು ಆಧಾರ್ ಕಾರ್ಡ್ ಮಾಡಿಸುವ ಸಲುವಾಗಿ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಕಾಂತಮ್ಮ ಒಬ್ಬರೇ ಮನೆಯಲ್ಲಿದ್ದರು.

ಈ ವೇಳೆ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಕಾಂತಮ್ಮ ಅವರ ತಲೆ ಹಾಗೂ ಮುಖಕ್ಕೆ ಆಯುಧದಿಂದ ಬಲವಾಗಿ ಹೊಡೆದು ಕೊಲೆ ಮಾಡಿ ಕಾಂತಮ್ಮ ಅವರ ಎರಡೂ ಕೈಗಳಲ್ಲಿದ್ದ
4 ಬಳೆ, ಓಲೆ, ಜುಮುಕಿ ಸೇರಿದಂತೆ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಹೊರಗೆ ಹೋಗಿದ್ದ ಮಗಳು ಮಂಜುಳಾ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ತಾಯಿ ಕಾಂತಮ್ಮ ಕೊಲೆಯಾಗಿ ಬಿದ್ದಿರುವುದು ಕಂಡು ಚೀರಿಕೊಂಡಿದ್ದಾರೆ.

ತಕ್ಷಣ ನೆರೆಹೊರೆಯವರು ಇವರ ಮನೆ ಬಳಿ ಆಗಮಿಸಿಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಾಣಸವಾಡಿ ಠಾಣೆ ಪೊಲೀಸರು ಶ್ವಾನದಳ, ಎಫ್‍ಎಸ್‍ಎಲ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.  ಸ್ಥಳಕ್ಕೆ ಭೇಟಿ ನೀಡಿದ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಕೊಲೆ ಆರೋಪಿಗಳ ಸುಳಿವಿದೆ. ಶೀಘ್ರ ಅವರನ್ನು ಬಂಧಿಸುತ್ತೇವೆ ಎಂದು ಈ ಸಂಜೆಗೆ ತಿಳಿಸಿದ್ದಾರೆ.  ಬಾಣಸವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

# ಪರಪ್ಪನ ಅಗ್ರಹಾರ:
ಕಾರ್ಪೆಂಟರ್ ತಲೆಗೆ ರಾಡ್‍ನಿಂದ ಹೊಡೆದು ಕೊಲೆ ಮಾಡಿ ಶವವನ್ನು ಕೆರೆಗೆ ಬಿಸಾಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಜೈಹಿಂದ್ ಯಾದವ್ (27) ಕೊಲೆಯಾದ ಕಾರ್ಪೆಂಟರ್.  ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಇದ್ದ ಕಾರಣ ತನ್ನ ಊರಿಗೆ ಹಿಂದಿರುಗಿದ್ದ ಈತ ಆಗಸ್ಟ್ ಮೊದಲ ವಾರದಲ್ಲಿ ಪುನಃ ಬೆಂಗಳೂರಿಗೆ ಮರಳಿದ್ದರು.

ಪರಪ್ಪನ ಅಗ್ರಹಾರ ವ್ಯಾಪ್ತಿಯ ಶಂಕರಪ್ಪ ಲೇಔಟ್‍ನಲ್ಲಿ ತನ್ನೊಂದಿಗೆ ಕೆಲಸ ಮಾಡುವವರೊಂದಿಗೆ ಸೇರಿ ಶೆಡ್ ಹಾಕಿಕೊಂಡು ವಾಸವಾಗಿದ್ದನು. ಈ ನಡುವೆ ಭಾನುವಾರದಿಂದ ಈತ ಕಾಣೆಯಾಗಿದ್ದ. ನಿನ್ನೆ ಈ ವ್ಯಾಪ್ತಿಯ ಕೆರೆಯಲ್ಲಿ ಗೋಣಿಚೀಲದಲ್ಲಿ ಶವ ತೇಲುತ್ತಿರುವುದು ಕಂಡುಬಂದಿದೆ.  ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಗೋಣಿಚೀಲ ತೆಗೆದು ನೋಡಿದಾಗ ಅದರಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕೊಲೆಯಾಗಿರುವ ವ್ಯಕ್ತಿ ಜೈಹಿಂದ್ ಯಾದವ್ ಎಂದು ಗೊತ್ತಾಗಿದೆ. ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದ ಈತನನ್ನು ದುಷ್ಕರ್ಮಿಗಳು ರಾಡ್‍ನಿಂದ ತಲೆಗೆ ಹೊಡೆದು ಕೊಲೆ ಮಾಡಿ ಶವವನ್ನು ನಂತರ ಗೋಣಿಚೀಲದಲ್ಲಿ ಹಾಕಿ ಕಲ್ಲನ್ನು ಕಟ್ಟಿ ಕೆರೆಗೆ ಹಾಕಿದ್ದಾರೆ.

ಭಾನುವಾರ ಸ್ನೇಹಿತರು ಸೇರಿ ಶೆಡ್‍ನಲ್ಲಿ ಪಾರ್ಟಿ ಮಾಡಿ ನಂತರ ಜಗಳವಾಡಿ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Facebook Comments