ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಪೊಲೀಸರಿಂದ ಕಿರುಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.14- ಅಕ್ಷರಸ್ಥರು ಹಾಗೂ ಪ್ರಜ್ಞಾವಂತರೇ ಹೆಚ್ಚಾಗಿ ಸಿಲುಕುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಪೊಲೀಸರು ಆರು ಕಿರುಚಿತ್ರಗಳನ್ನು ತಯಾರಿಸಿದ್ದಾರೆ. ಕ್ಯೂಆರ್ ಕೋಡ್ ಹಗರಣ, ಡೇಟಿಂಗ್ ಅಪ್ಲಿಕೇಶನ್, ಒಟಿಪಿ, ಕ್ರೆಡಿಟ್‍ಕಾರ್ಡ್ ವಂಚನೆ, ಅಂತರ್ಜಾಲದ ಮೂಲಕ ಬೆದರಿಸುವುದು ಮತ್ತು ನಿಂದಿಸುವುದು, ನಕಲಿ ವಿಡಿಯೋ, ಫೋಟಗಳ ತಯಾರಿಕೆ ಸೇರಿದಂತೆ ಅನೇಕ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಆಗ್ನೇಯ ವಿಭಾಗದ ಪೊಲೀಸರು ಮುಂದಾಗಿದ್ದಾರೆ.

ರಾಜ್ಯ ಸರ್ಕಾರ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಸಂಬಂಧಪಟ್ಟ ಅಪರಾಧಗಳನ್ನು ಅಂತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇವುಗಳನ್ನು ನಿಗ್ರಹಿಸಲು ಬೆಂಗಳೂರಿನ 8 ವಿಭಾಗಗಳಲ್ಲೂ ಸರ್ಕಾರ ಸೈಬರ್ ಕ್ರೈಂ, ಎಕನಾಮಿಕ್ ಅಫೆನ್ಸಸ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಪೊಲೀಸ್ ಠಾಣೆಗಳನ್ನು ಆರಂಭಿಸಿದೆ. ಸೈಬರ್ ಕ್ರೈಂ ಎಂಬುದು ಆಧುನಿಕ ಸಮಾಜದಲ್ಲಿ ಹಾಸುಹೊಕ್ಕಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಡಂಬೂತವಾಗಿ ಬೆಳೆದು ನಿಂತಿದೆ.

ಅವಿದ್ಯಾವಂತರಿಗಿಂತಲೂ ಹೆಚ್ಚಾಗಿ ವಿದ್ಯಾವಂತರೆ ಇದರ ಬಲೆಗೆ ಸಿಲುಕುತ್ತಿದ್ದಾರೆ. ಆದರೆ, ಬಹಳಷ್ಟು ಮಂದಿಗೆ ಸೈಬರ್ ಕ್ರೈಂನ ಸ್ವರೂಪದ ಬಗ್ಗೆ ಅರಿವಿರುವುದಿಲ್ಲ. ಯಾವುದಾದರೂ ಕೃತ್ಯಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳಗಾದಾಗ ಅದನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬ ಅರಿವಿಲ್ಲದೆ ಪರದಾಡುವಂತಾಗುತ್ತದೆ. ಇತ್ತೀಚೆಗೆ ಮ್ಯಾಟ್ರಿಮೊನಿ, ಡೇಟಿಂಗ್ ಆ್ಯಪ್ ಹೆಸರಿನಲ್ಲಿ ಸಾಕಷ್ಟು ಅಪರಾಧಗಳು ನಡೆದಿವೆ. ಲೋನ್ ಆ್ಯಪ್‍ಗಳ ಮೂಲಕ ಸಾವಿರಾರು ಮಂದಿಯನ್ನು ವಂಚಿಸಲಾಗಿದೆ.

ಹನಿಟ್ರ್ಯಾಪ್ ಅಂತಹ ಕೃತ್ಯಗಳಲ್ಲಿ ಬಹಳಷ್ಟು ಮಂದಿ ಮರ್ಯಾದೆಗೆ ಅಂಜಿ ದೂರು ಕೊಡಲು ಕೂಡ ಹಿಂದೇಟು ಹಾಕುತ್ತಾರೆ. ದಿನೇ ದಿನೇ ಈ ರೀತಿಯ ಅಪರಾಧಗಳು ವರದಿಯಾಗುತ್ತಲೇ ಇವೆ. ಜನ ಸಾಮಾನ್ಯರನ್ನು ಬೆಚ್ಚಿಬೀಳಿಸುತ್ತಲೇ ಇವೆ. ಎಲ್ಲೋ ಕುಳಿತು ಬಲೆ ಬೀಸುವ ಆರೋಪಿಗಳು ಅಮಾಯಕರನ್ನು ವಂಚಿಸಿ ಯಾರಿಗೂ ಸಿಗದಂತೆ ತಲೆ ಮರೆಸಿಕೊಳ್ಳುತ್ತಾರೆ. ಒಂದೆರಡು ಪ್ರಕರಣಗಳಲ್ಲಿ ನಕ್ಷತ್ರಿಕರಂತೆ ಬೆನ್ನುಬಿದ್ದ ಬೆಂಗಳೂರು ಪೊಲೀಸರು ಮುಂಬೈ ಹಾಗೂ ಇತರೆಡೆಗಳಲ್ಲಿ ಅಡಗಿಕುಳಿತಿದ್ದ ಆರೋಪಿಗಳನ್ನು ಹೆಡೆಮುರಿಕಟ್ಟಿ ತಂದಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದಾಗ ವಿದ್ಯಾವಂತರೇ ಹೆಚ್ಚು ಬಕ್ರಾಗಳಾಗಿರುವುದು ಪತ್ತೆಯಾಗಿದೆ. ಹಣದ ಆಸೆಗೋ, ಹೆಣ್ಣಿನ ಆಸೆಗೋ ಅಥವಾ ಇನ್ಯಾವುದೋ ಲಾಭದ ದುರಾಸೆಗಾಗಿ ವಿದ್ಯಾವಂತರು ಮೋಸಹೋಗುತ್ತಿರುವುದು ಸಾಮಾನ್ಯವಾಗಿದೆ. ಉಡುಗೊರೆಗಳು, ಬಹುಮಾನದ ಹೆಸರಿನಲ್ಲಿ ಜನರನ್ನು ಯಾಮಾರಿಸಿರುವ ನೂರಾರು ಪ್ರಕರಣಗಳು ವರದಿಯಾಗಿವೆ.
2020ರಲ್ಲಿ ಬೆಂಗಳೂರಿನ 8 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 8529 ಪ್ರಕರಣಗಳು, 2019ರಲ್ಲಿ 10,054 ಪ್ರಕರಣಗಳು ದಾಖಲಾಗಿವೆ.

ಆಗ್ನೇಯ ವಿಭಾಗದಲ್ಲಿನ ಸಿಇಎನ್ ಪೊಲೀಸ್ ಠಾಣೆಯೊಂದರಲ್ಲೇ ಸುಮಾರು ಒಂದು ಸಾವಿರ ಪ್ರಕರಣಗಳು ವರದಿಯಾಗಿವೆ.  ಬಹಳಷ್ಟು ಮಂದಿಗೆ ಒಟಿಪಿ ಪಡೆದು ಟೋಪಿ ಹಾಕಲಾಗಿದೆ. ಇನ್ನು ಕೆಲವರಿಗೆ ಪ್ರೀತಿ-ಪ್ರೇಮದ ಹೆಸರಿನಲ್ಲಿ ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡಿದ್ದು, ಇವುಗಳನ್ನು ಪತ್ತೆಹಚ್ಚುವುದು. ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

ಹಾಗಾಗಿ ಪೊಲೀಸರು ದುರಾಸೆಯ ಬೆನ್ನುಬಿದ್ದು, ಸೈಬರ್ ಕ್ರೈಂನ ಸುಳಿಗೆ ಸಿಲುಕದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಪೊಲೀಸರು ಕಿರುಚಿತ್ರಗಳನ್ನು ತಯಾರಿಸಿದ್ದಾರೆ.

Facebook Comments