ಬೆಂಗಳೂರಲ್ಲಿ ಮಳೆ ಅವಾಂತರ, ತುರ್ತು ಕ್ರಮಕ್ಕೆ ಸುರೇಶ್‍ಕುಮಾರ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.12- ಮಳೆ ಅನಾಹುತಗಳನ್ನು ತಪ್ಪಿಸಲು ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳುವುದಾಗಿ ಮಾಜಿ ಸಚಿವ ಹಾಗೂ ಶಾಸಕ ಎಸ್.ಸುರೇಶ್‍ಕುಮಾರ್ ಇಂದಿಲ್ಲಿ ತಿಳಿಸಿದರು. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಸವೇಶ್ವರನಗರ ವಾರ್ಡ್ ಹಾಗೂ ಇತರೆ ಪ್ರದೇಶಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೆಲವೆಡೆ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದ್ದು, ಇದರಿಂದ ಸಮಸ್ಯೆಗಳು ಎದುರಾಗಿವೆ.

ಮೋರಿಗಳಲ್ಲಿ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿಯಲಾಗದೆ ರಸ್ತೆಗೆ ನೀರು ಬರುತ್ತಿದೆ. ಕೆಲ ಮನೆಗಳಿಗೂ ನೀರು ನುಗ್ಗಿ ವಾಹನಗಳು ಹಾನಿಗೊಳಗಾಗಿರುವುದು ಕಂಡು ಬಂದಿದೆ ಎಂದರು.

ಬಸವೇಶ್ವರನಗರದ 8ನೇ ಮೈನ್ ಬಳಿ ಮಳೆ ನೀರಿನಲ್ಲಿ ಕಾರೊಂದು ಕೊಚ್ಚಿ ಹೋಗಿ ಮೋರಿಯಲ್ಲಿ ಸಿಲುಕಿಕೊಂಡಿದ್ದು, ಅಲ್ಲಿಗೆ ಭೇಟಿ ನೀಡಿದ ಶಾಸಕರು, ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಹಾಗೂ ರಾಜಕಾಲುವೆ ದುರಸ್ಥಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೆಲವೆಡೆ ನೆಲಮಾಳಿಗೆಗಳು, ಅಪಾರ್ಟ್‍ಮೆಂಟ್‍ಗಲ್ಲಿ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಇಲ್ಲಿ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಶೀಘ್ರದಲ್ಲೇ ಕಾರ್ಯಯೋಜನೆಯನ್ನು ರೂಪಿಸಲಾಗುವುದು ಎಂದು ಸುರೇಶ್‍ಕುಮಾರ್ ತಿಳಿಸಿದರು.

ಇನ್ನೂ ಕೆಲವು ದಿನ ಮಳೆ ಸುರಿಯುವುದರಿಂದ ಬಿಬಿಎಂಪಿ ಹಾಗೂ ಸ್ಥಳೀಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಜಡ್ಜಸ್‍ಕಾಲೋನಿ, ಭೋವಿಕಾಲೋನಿ, ನೇತಾಜಿ ಸುಭಾಷ್‍ಚಂದ್ರಬೋಸ್ ಆಟದ ಮೈದಾನ ಸೇರಿದಂತೆ ಹಲವು ಕಡೆ ಸುಮಾರು 5 ಕಿ.ಮೀ. ನಡೆದುಕೊಂಡೇ ಶಾಸಕರು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಬಿಬಿಎಂಪಿ ಅಧಿಕಾರಿಗಳಾದ ನಾರಾಯಣ್, ಜಯಪ್ರಕಾಶ್, ಸ್ಥಳೀಯ ಮುಖಂಡರಾದ ಮಹೇಶ್‍ರಾವ್, ಗಿರೀಶ್‍ಗೌಡ ಸೇರಿದಂತೆ ಹಲವರು ಶಾಸಕರ ಜತೆಗಿದ್ದರು.

Facebook Comments