ಇನ್ನೂ 2 ದಿನ ಮುಂದುವರೆಯಲಿದೆ ಮಳೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.24- ನಿನ್ನೆ ಸಂಜೆ ಹಾಗೂ ರಾತ್ರಿ ರಾಜಧಾನಿ ಬೆಂಗಳೂರನ್ನು ಬೆಚ್ಚಿ ಬೀಳಿಸುವ ಮಳೆ ಇನ್ನೂ ಎರಡು ದಿನ ಮುಂದುವರೆಯುವ ಸಾಧ್ಯತೆಗಳಿವೆ. ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಕಳೆದೆರಡು ವಾರಗಳಿಂದ ಮಳೆಯಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಾಗೂ ಬಂಗಾಳಕೊಲ್ಲಿಯಿಂದ ಪಶ್ಚಿಮ ಅಭಿಮುಖವಾಗಿ ಉಂಟಾಗಿರುವ ಟ್ರಪ್‍ನಿಂದಾಗಿ ಬೆಂಗಳೂರಿನ ದಕ್ಷಿಣ ಭಾಗದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಜಿ.ಎಸ್ ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ನಿನ್ನೆ ಮಧ್ಯಾಹ್ನದ ನಂತರ ಟ್ರಪ್ ಕ್ರಿಯಾಶೀಲವಾಗಿದ್ದು, ನಿನ್ನೆ ಸಂಜೆ ಹಾಗೂ ರಾತ್ರಿ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಿದೆ. ಹವಾ ಮುನ್ಸೂಚನೆ ಪ್ರಕಾರ ಇಂದು ಕೂಡ ಮಳೆ ಮುಂದುವರೆಯಲಿದ್ದು, ನಾಳೆಯಿಂದ ಮಳೆಯ ತೀವ್ರತೆ ಇಳಿಮುಖವಾಗಲಿದೆ ಎಂದರು.

ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪರಿಣಾಮ ಈಗ ರಾಜ್ಯದ ಮೇಲೆ ಆಗುತ್ತಿಲ್ಲ. ಅದು ಬಾಂಗ್ಲದೇಶದ ಕಡೆಗೆ ಸಾಗಿದೆ. ಹೀಗಾಗಿ ನಾಳೆಯಿಂದ ಮಳೆಯ ಆರ್ಭಟ ಇಳಿಮುಖವಾಗುವ ಸಾಧ್ಯತೆ ಇದೆ. ಆದರೆ ಕೇರಳ ಕರಾವಳಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಕರಾವಳಿ ಸೇರಿದಂತೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹೇಳಿದರು.

ನೈರುತ್ಯ ಮುಂಗಾರು ಮರುಳುವಿಕೆ ಆರಂಭವಾಗಲಿದ್ದು, ಅ. 28ರ ವೇಳೆಗೆ ಇಡೀ ದೇಶದಿಂದಲೇ ಮುಂಗಾರು ಮರಳಲಿದೆ. ಅದೇ ವೇಳೆಗೆ ಈಶಾನ್ಯ ಹಿಂಗಾರು ಕೂಡ ಆರಂಭವಾಗಲಿದೆ ಎಂಬ ಹವಾ ಮುನ್ಸೂಚನೆ ಇದೆ. ಮುಂಗಾರು ಮುಗಿಯುತ್ತಿದ್ದಂತೆ ಹಿಂಗಾರಿನ ಮಾರುತಗಳು ಬಂಗಾಳ ಕೊಲ್ಲಿಯಿಂದ ಆರಂಭವಾಗಲಿವೆ ಎಂದರು. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಹಂಗಾಮಿನಲ್ಲಿ ಕೊಯ್ಲಿಗೆ ಬಂದಿದ್ದ ರಾಗಿ, ಜೋಳ, ಶೇಂಗಾ ಮತ್ತಿತರ ಬೆಳೆಗಳು ಹಾನಿಗಿಡಾಗಿವೆ. ಅಲ್ಲದೇ ಅತಿವೃಷ್ಠಿ ಹಾಗೂ ಪ್ರವಾಹದಿಂದಲೂ ಭಾರೀ ಪ್ರಮಾಣದ ಹಾನಿಯುಂಟಾಗಿದೆ.

ಮಳೆ ವಿವರ ಮಿಲಿ ಮೀಟರ್‍ಗಳಲ್ಲಿ: ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ: ಬೆಂಗಳೂರು ದಕ್ಷಿಣ 110, ಬೆಂಗಳೂರು ಪೂರ್ವ 24, ಆನೇಕಲ್ಲು 32, ಚಿಕ್ಕಮಗಳೂರು 43, ಕೊಡಗು 20, ಹಾಸನ 63, ಮಂಡ್ಯ 105, ಉತ್ತರ ಕನ್ನಡ 34, ದಕ್ಷಿಣ ಕನ್ನಡ 25, ಉಡುಪಿ 20, ಚಿತ್ರದುರ್ಗ 89, ದಾವಣಗೆರೆ 94, ಶಿವಮೊಗ್ಗ 107, ಬೆಂಗಳೂರು ಗ್ರಾಮಾಂತರ 44, ರಾಮನಗರ 56, ಕೋಲಾರ 82 ಮಿಲಿಮೀಟರ್ ನಷ್ಟು ಗರಿಷ್ಠ ಪ್ರಮಾಣದ ಮಳೆಯಾದ ವರದಿಯಾಗಿದೆ.

Facebook Comments