ವರುಣನ ಆರ್ಭಟಕ್ಕೆ ಡ್ರೈನೇಜ್ ಸಿಟಿಯಾದ ಬೆಂಗಳೂರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.10- ಕೇವಲ ಎರಡು ದಿನಗಳ ಮಳೆಗೆ ಸಿಲಿಕಾನ್ ಸಿಟಿ ಡ್ರೈನೇಜ್ ಸಿಟಿಯಾಗಿ ಪರಿವರ್ತನೆಗೊಂಡಿದೆ. ಮೊನ್ನೆ ಮತ್ತು ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಬಿಬಿಎಂಪಿ ವ್ಯಾಪ್ತಿಯ 40ಕ್ಕೂ ಹೆಚ್ಚು ವಾರ್ಡ್‍ಗಳಲ್ಲಿ ಸಾಕಷ್ಟು ಅನಾಹುತ ಸಂಭವಿಸಿದೆ.

ಕೆಲ ಪ್ರದೇಶಗಳ ಪ್ರಮುಖ ರಸ್ತೆಗಳು ಕೊಳಚೆ ಗುಂಡಿಗಳಾಗಿ ಪರಿವರ್ತನೆಗೊಂಡಿದ್ದು , ಕೆಲವರ ಮನೆಗಳಿಗೆ ಕೊಳಚೆ ನೀರು ನುಗ್ಗಿ ಇಡೀ ಪ್ರದೇಶ ದುರ್ನಾತ ಬೀರುತ್ತಿದೆ. ನಾಯಂಡಹಳ್ಳಿ ಸಮೀಪ ರಾಜ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆ ಮಳೆ ನೀರಿಗೆ ಕೊಚ್ಚಿ ಹೋದ ಪರಿಣಾಮ ರಾಜಕಾಲುವೆ ನೀರು ಪಕ್ಕದ ಪ್ರಮೋದ್ ಲೇ ಔಟ್‍ನ 25ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿತ್ತು.

ಕೆಲ ಮನೆಗಳಲ್ಲಿ 5 ಅಡಿ ಎತ್ತರಕ್ಕೆ ನೀರು ನಿಂತ ಪರಿಣಾಮ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ಲ್ಯಾಪ್‍ಟಾಪ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾದವು. ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್, ಕೆಂಚನಹಳ್ಳಿ , ಜನಪ್ರಿಯ ಅಬೋರ್ಡ್ , ಮೈಲಸಂದ್ರ ಮತ್ತಿತರ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.  ಮಾತ್ರವಲ್ಲ ಮಹತ್ವದ ದಾಖಲೆ ಪತ್ರಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಅನಾಹುತ ಕುರಿತಂತೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಮನೆಯಲ್ಲಿರುವ ವಸ್ತುಗಳೆಲ್ಲಾ ಹಾನಿಯಾಗಿದೆ. ಜೀವನ ಸಾಗಿಸುವುದು ಹೇಗೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ನಿನ್ನೆ ರಾತ್ರಿ ಸುರಿದ ಮಳೆಗೆ ಹೆಬ್ಬಾಳ , ಕೊಡಿಗೇಹಳ್ಳಿ ಹಾಗೂ ಸುತ್ತಮುತ್ತಲ ಕೆಲ ಬ್ರಿಡ್ಜ್‍ಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿನ ಸೇತುವೆಗಳೇ ಜಲಾವೃತಗೊಂಡಿದ್ದರಿಂದ ರಾತ್ರಿ ಇಡೀ ವಾಹನ ಸವಾರರು ಪರದಾಡುವಂತಾಯಿತು. ಕೊಡಿಗೇಹಳ್ಳಿ ಸಮೀಪ ತಿಂಡ್ಲು ಮತ್ತು ವಿದ್ಯಾರಣ್ಯಪುರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ.

ಮೊನ್ನೆ ಬಿದ್ದ ಮಳೆಯಿಂದಲೇ ಸೇತುವೆ ಜಲಾವೃತಗೊಂಡಿತ್ತು. ನಿಂತ ನೀರನ್ನು ಬಿಬಿಎಂಪಿ ಅಧಿಕಾರಿಗಳು ಪಂಪ್‍ಸೆಟ್ ಬಳಸಿ ಹೊರ ಹಾಕಲು ಯತ್ನಿಸುತ್ತಿದ್ದರು. ಮತ್ತೆ ನಿನ್ನೆ ರಾತ್ರಿ ಮಳೆಯಾದ ಹಿನ್ನೆಲೆಯಲ್ಲಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ರಾತ್ರಿ ಇಡೀ ಸುರಿದ ಮಳೆಗೆ ಮೆಜೆಸ್ಟಿಕ್ ಸುತ್ತಮುತ್ತಲ ಪ್ರದೇಶಗಳಲ್ಲೂ ಸಾಕಷ್ಟು ಅನಾಹುತ ಸಂಭವಿಸಿತು.

ಮಾಗಡಿ ರಸ್ತೆ, ವಿಜಯನಗರ , ಅಗ್ರಹಾರ ದಾಸರಹಳ್ಳಿ, ಹೆಬ್ಬಾಳ, ಮೂಡಲಪಾಳ್ಯ, ಹೆಣ್ಣೂರು, ಹೊರಮಾವು, ಹುಳಿಮಾವು, ಎಚ್‍ಆರ್‍ಬಿಆರ್ ಬಡಾವಣೆ ಸೇರಿದಂತೆ 40ಕ್ಕೂ ಹೆಚ್ಚು ವಾರ್ಡ್‍ಗಳಲ್ಲಿ ಭಾರೀ ಅನಾಹುತವಾಗಿದೆ. ಮಾಗಡಿ ರಸ್ತೆ ಸಮೀಪದ ಕುಷ್ಠ ರೋಗ ಆಸ್ಪತ್ರೆ ಹಿಂಭಾಗದಲ್ಲಿರುವ ಬಿಬಿಎಂಪಿ ಕ್ವಾರ್ಟರ್ಸ್‍ಗೂ ನೀರು ನುಗ್ಗಿ ಅಲ್ಲಿನ ನಿವಾಸಿಗಳು ರಾತ್ರಿ ಇಡೀ ಪರದಾಡುವಂತಾಯಿತು.

ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಲ್ಲಿ ವಾಸಿಸುತ್ತಿರುವವರು ಬಿಬಿಎಂಪಿ ಉದ್ಯೋಗಿಗಳಾಗಿದ್ದರೂ ಪಾಲಿಕೆಯವರು ನಮ್ಮ ನೆರವಿಗೆ ಧಾವಿಸದಿರುವುದು ಯಾವ ನ್ಯಾಯ ಎಂದು ಅಲ್ಲಿನ ನಿವಾಸಿಗಳು ಪ್ರಶ್ನಿಸಿದ್ದಾರೆ.

ಲೊಟ್ಟೆ ಗೊಲ್ಲಹಳ್ಳಿ ಸಮೀಪದ ಅಪಾರ್ಟ್‍ಮೆಂಟ್‍ವೊಂದರ ನೆಲಮಹಡಿ ಸಂಪೂರ್ಣ ಜಲಾವೃತಗೊಂಡಿದ್ದು , ಹಲವಾರು ವಾಹನಗಳು ನೀರಿನಲ್ಲಿ ಮುಳುಗಿ ಹೋಗಿತ್ತು. ಓಕಳಿಪುರಂ, ಯಶವಂತಪುರ, ಮಲ್ಲೇಶ್ವರ, ಬನಶಂಕರಿ ಮತ್ತಿತರ ಪ್ರದೇಶಗಳಲ್ಲಿರುವ ಅಂಡರ್‍ಪಾಸ್‍ಗಳು ಸಂಪೂರ್ಣ ಜಲಾವೃತಗೊಂಡಿತ್ತು.

ಹುಳಿಮಾವು , ಹೊರಮಾವು, ಹೆಣ್ಣೂರು ಮತ್ತಿತರ ಪ್ರದೇಶಗಳ ರಸ್ತೆಗಳಲ್ಲಿ ಆಳುದ್ದ ನೀರು ಹರಿಯುತ್ತಿತ್ತು. ಅಕ್ಕ ಪಕ್ಕದ ರಾಜಕಾಲುವೆಗಳು ಉಕ್ಕಿ ಹರಿದ ಪರಿಣಾಮ ಪ್ರದೇಶದಾದ್ಯಂತ ಕೊಳಚೆ ನೀರು ತುಂಬಿಕೊಂಡು ಜನ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

# ಯೆಲ್ಲೋ ಅಲರ್ಟ್ ಘೋಷಣೆ: ಇಂದು ಮತ್ತು ಇನ್ನೆರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು , ಜನ ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಘೋಷಣೆ ಮಾಡಿರುವುದರಿಂದ ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅಗ್ರಹಾರ ದಾಸರಹಳ್ಳಿಯಲ್ಲಿ ಅತಿ ಹೆಚ್ಚು ಮಳೆ: ನಿನ್ನೆ ರಾತ್ರಿ ಅಗ್ರಹಾರ ದಾಸರಹಳ್ಳಿಯಲ್ಲಿ 109 ಮಿ.ಮೀಟರ್‍ನಷ್ಟು ಮಳೆಯಾಗಿದೆ.

ಕೊಟ್ಟಿಗೆಪಾಳ್ಯದಲ್ಲಿ 85, ಬಸವನಗುಡಿಯಲ್ಲಿ 81, ರಾಜಾಜಿನಗರ 78, ಚೊಕ್ಕಸಂದ್ರ 76, ಚಾಮರಾಜಪೇಟೆ 70 , ನಾಗಪುರದಲ್ಲಿ 69, ಕಾಟನ್‍ಪೇಟೆ ಮತ್ತು ದೊಡ್ಡ ಬಿದರಕಲ್ಲಿನಲ್ಲಿ 68, ಪೀಣ್ಯ ದಲ್ಲಿ 67, ಹೆಗ್ಗನಹಳ್ಳಿ ಮತ್ತು ವಿದ್ಯಾಪೀಠದಲ್ಲಿ ತಲಾ 64, ಮಾರುತಿ ಮಂದಿರದಲ್ಲಿ 53,ಘಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 52, ಶಿವನಗರದಲ್ಲಿ 79.5, ಜ್ಞಾನಭಾರತಿ 37, ನಂದಿನಿ ಬಡಾವಣೆ 53, ಹಂಪಿನಗರದಲ್ಲಿ 45, ಹೆಮ್ಮಿಗೆಪುರದಲ್ಲಿ 47 ಹಾಗೂ ಕುಮಾರಸ್ವಾಮಿ ಬಡಾವಣೆಯಲ್ಲಿ 48 ಮಿ.ಮೀಟರ್‍ನಷ್ಟು ಮಳೆಯಾಗಿದೆ.

Facebook Comments