ಮೇಲ್ಸೇತುವೆಗಳಲ್ಲಿ  ಗುಂಡಿಗಳದ್ದೇ ಕಾರುಬಾರು, ತ್ಯಾಪೆ ಹಾಕಿ ಮುಚ್ಚುವ ಪ್ರಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.5- ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಬೆಂಗಳೂರಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದು ಒಂದು ಕಡೆಯಾದರೆ. ಮತ್ತೊಂದೆಡೆ ಇತ್ತೀಚೆಗಷ್ಟೇ ನಿರ್ಮಾಣವಾಗಿದ್ದ ಮೇಲ್ಸೇತುವೆಗಳು ಹಳ್ಳ, ದಿಣ್ಣೆಗಳಾಗಿ ಮಾರ್ಪಟ್ಟು ಜನ ಸಾಮಾನ್ಯರ ಸಿಟ್ಟಿಗೆ ಕಾರಣವಾಗಿವೆ.

ನಗರದಲ್ಲಿರುವ ಬಹುತೇಕ ಮೇಲ್ಸೇತುವೆ ರಸ್ತೆಗಳ ಮೇಲೆ ಹಳ್ಳ, ದಿಣ್ಣೆಗಳು ಹೆಚ್ಚಾಗಿವೆ. ಹೀಗಾಗಿ ನೆಲಮಟ್ಟದ ರಸ್ತೆ ಮೇಲೆರುವ ಗುಂಡಿಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸುವುದು ದುಸ್ಸಾಹಸದ ಕೆಲಸವಾಗಿರುವಾಗ ಸುಗಮ ಸಂಚಾರಕ್ಕಾಗಿ ನಿರ್ಮಿಸಲಾದ ಮೇಲ್ಸೇತುವೆ ಮೇಲೂ ಅದೇ ರೀತಿಯ ಸರ್ಕಸ್ ಮಾಡಬೇಕಾಗಿರುವ ದುರ್ವಿದಿ ನಗರದ ನಾಗರಿಕರದ್ದಾಗಿದೆ.

ಶಾಂಭವಿ ನಗರ ವಾರ್ಡ್ ನಂ.1ರಲ್ಲಿ ರೈಲ್ವೆ ಹಳಿಗೆ ಅಡ್ಡಲಾಗಿ ಮೂರು ವರ್ಷಗಳ ಹಿಂದಷ್ಟೇ ಮೇಲ್ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ರಸ್ತೆಯುದ್ದಕ್ಕೂ ಗುಂಡಿಗಳೇ ಇವೆ. ಅವುಗಳನ್ನು ಮುಚ್ಚಲು ಅಲ್ಲಲ್ಲಿ ಮಣ್ಣು, ಡಾಂಬರ್ ಹಾಕಿ ತೇಪೆ ಹಾಕಲಾಗಿದೆ. ಶಾಂಭವಿ ರೈಲ್ವೆ ಹಳಿಯ ಮೇಲ್ಸೇತುವೆಯಲ್ಲಿರುವ ಎರಡು ಪಿಲ್ಲರ್‌ಗಳ ನಡು ವಿನ ಜೋಡಣಾ ಸ್ಥಳದಲ್ಲಿ ಉಂಟಾಗಿರುವ ಕಂದಕ ದೊಡ್ಡದಾಗಿ ಭಾರೀ ವಾಹನಗಳು ಸಂಚರಿಸುವಾಗ ಆಗುವ ಏರಿಳಿತದಿಂದ ಆತಂಕ ನಿರ್ಮಾಣವಾಗಿದೆ.

ಸಣ್ಣ ಪ್ರಮಾಣದ ವಾಹನಗಳು ಸಂಚರಿಸುವಾಗಲೂ ಕಂದಕದ ಅಲುಗಾಟಕ್ಕೆ ಬೆಚ್ಚಿ ಬೀಳುತ್ತಿದ್ದಾರೆ. ಸೇತುವೆ ಯಾವ ಸಂದರ್ಭದಲ್ಲಿ ಕುಸಿಯುತ್ತದೋ ಎಂಬ ಭೀತಿಯಲ್ಲೇ ಸಂಚರಿಸುತ್ತಿದ್ದಾರೆ. ಕಂದಕದ ಅಲುಗಾಟ ಮರೆಮಾಚಲು ಬಿಬಿಎಂಪಿ ಅಧಿಕಾರಿಗಳು ಸಂದಿಗೆ ಗೋಣಿ ಚೀಲವನ್ನು ತುರುಕಿದ್ದಾರೆ. ಈ ರೀತಿಯ ತೇಪೆ ಹಚ್ಚುವ ಕೆಲಸಗಳನ್ನು ಮಾಡುವ ಬದಲು ಅಧಿಕಾರಿಗಳು ಪ್ರಾಮಾಣಿಕವಾಗಿ ಗುಣಮಟ್ಟದ ಕಾಮಗಾರಿಗಳನ್ನು ಮಾಡದೇ ಇರುವುದೇಕೆ ಎಂಬ ಪ್ರಶ್ನೆಗಳನ್ನು ನಾಗರಿಕರು ಮುಂದಿಟ್ಟಿದ್ದಾರೆ.

ನಿರ್ಮಾಣಗೊಂಡು ಇನ್ನೂ ಮೂರು ವರ್ಷವಾಗಿಲ್ಲ. ಆಗಲೇ ಸೇತುವೆ ಬಿರುಕು ಬಿಟ್ಟಿದೆ. ರಸ್ತೆ ಯಲ್ಲಿ ಗುಂಡಿಗಳಿವೆ. ಸಂಚಾರಕ್ಕೆ ಯೋಗ್ಯವಲ್ಲ ಎಂಬ ಮಟ್ಟಿಗೆ ಅಲುಗಾಡುತ್ತಿದೆ. ಆದರೂ ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.

ಇನ್ನು ಕಂಠೀರವ ಸ್ಟುಡಿಯೋ ಬಳಿ ಇರುವ ಮೇಲ್ಸೇತುವೆ ನಿರ್ಮಾಣಗೊಂಡು ಒಂದೂವರೆ ವರ್ಷ ಕೂಡ ಕಳೆದಿಲ್ಲ. ಆಗಲೇ ಮೇಲ್ಸೇತುವೆ ರಸ್ತೆಯುದ್ದಕ್ಕೂ ಗುಂಡಿಗಳು ರಾರಾಜಿಸುತ್ತಿವೆ. ಮಳೆ ಬಂದರೆ ಈ ಗುಂಡಿಗಳಲ್ಲಿ ನೀರು ನಿಂತು ರಸ್ತೆಯಾವುದೂ, ಗುಂಡಿ ಯಾವುದು ಎಂಬುದು ತಿಳಿಯದೆ ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ.
ಸುಮನಹಳ್ಳಿ ಮೇಲ್ಸೇತುವೆಯ ಒಂದು ಭಾಗ ಇತ್ತೀಚೆಗಷ್ಟೇ ಕುಸಿದು ಆತಂಕ ಸೃಷ್ಟಿಸಿತ್ತು. ಅದರ ರಿಪೇರಿಗಾಗಿ ಸದ್ಯಕ್ಕೆ ಅಲ್ಲಿ ಸಂಚಾರವನ್ನೇ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರಿನ ಉದ್ದಕ್ಕೂ ಈ ರೀತಿ ಮೇಲ್ಸೇತುವೆಯ ಅದ್ವಾನ ಗಳು ಎಗ್ಗಿಲ್ಲದೆ ಸಿಗುತ್ತಿವೆ. ಬಿಬಿಎಂಪಿ ಅಧಿಕಾರಿಗಳು ನಾಗರಿಕರ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮತ್ತಿನ್ಯಾವ ಘನ ಕಾರ್ಯದಲ್ಲಿ ಮಗ್ನರಾಗಿದ್ದಾರೋ ಎಂಬ ಸಿಟ್ಟು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

Facebook Comments