ಬೆಂಗಳೂರಿನಲ್ಲಿ ಸಾಲು ಸಾಲು ಪ್ರತಿಭಟನೆ, ಸಂಚಾರ ವ್ಯತ್ಯಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.10- ಸರಣಿ ಪ್ರತಿಭಟನೆಗಳ ಬಿಸಿಯಿಂದ ಉಂಟಾದ ಟ್ರಾಫಿಕ್‍ಜಾಮ್‍ನಿಂದ ಬೆಂಗಳೂರು ಜನ ಹೈರಾಣಾದರು.  ರೈತ ಸಂಘಟನೆಗಳ ಪ್ರತಿಭಟನೆ, ಸಾರಿಗೆ ನೌಕರರ ಬೃಹತ್ ರ್ಯಾಲಿಯಿಂದ ಬೆಂಗಳೂರಿನ ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಕೆಆರ್ ವೃತ್ತ, ಹಡ್ಸನ್ ವೃತ್ತ, ಕೆಜಿ ರೋಡ್, ಶಿವಾನಂದ ವೃತ್ತ ಸೇರಿದಂತೆ ವಿವಿಧೆಡೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ಕಳೆದ ಮೂರು ದಿನಗಳಿಂದಲೂ ನಗರದ ಜನರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿಲ್ಲ. ಡಿ.8ರಂದು ಭಾರತ್ ಬಂದ್ ಅಂಗವಾಗಿ ರೈತ ಸಂಘಟನೆಗಳು ನಡೆಸಿದ ಪ್ರತಿಭಟನಾ ರ್ಯಾಲಿಯಿಂದ ರೇಸ್‍ಕೋರ್ಸ್, ಆನಂದರಾವ್ ವೃತ್ತ, ಶಿವಾನಂದ ವೃತ್ತ, ಶೇಷಾದ್ರಿಪುರಂ ರಸ್ತೆ ಸೇರಿದಂತೆ ವಿವಿಧೆಡೆ ಟ್ರಾಫಿಕ್ ಜಾಮ್‍ನಿಂದ ಜನ ಕಿರಿಕಿರಿ ಅನುಭವಿಸುವಂತಾಯಿತು.

ನಿನ್ನೆ ರಾಜ್ಯ ರೈತ ಸಂಘ, ಹಸಿರು ಸೇನೆ ನಡೆಸಿದ ಬಾರುಕೋಲು ಚಳವಳಿಯಿಂದ ಕೂಡ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಂದು ರಾಜ್ಯ ರಸ್ತೆ ಸಾರಿಗೆ, ವಾಯವ್ಯ, ಈಶಾನ್ಯ ಸಾರಿಗೆ ನಿಗಮ ಹಾಗೂ ಬಿಎಂಟಿಸಿ ಸಾರಿಗೆ ನೌಕರರು ನಡೆಸಿದ ಬೃಹತ್ ರ್ಯಾಲಿ ಮತ್ತು ರೈತ, ದಲಿತ, ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿದ್ದ ರಾಜಭವನ ಮುತ್ತಿಗೆ, ಪ್ರತಿಭಟನಾ ರ್ಯಾಲಿಗಳಿಂದ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.

ಸಂಚಾರವನ್ನು ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ಪರ್ಯಾಯ ರಸ್ತೆಗಳಲ್ಲಿ ವಾಹನ ಸವಾರರನ್ನು ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು. ಪ್ರತಿಭಟನೆ ಮಾಹಿತಿ ಮೊದಲೇ ತಿಳಿದಿದ್ದರಿಂದ ಹಲವು ರಸ್ತೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬ್ಲಾಕ್ ಮಾಡಲಾಗಿತ್ತು ಮತ್ತು ಒನ್‍ವೇ ರಸ್ತೆಗಳನ್ನು ಟು ವೇ ಮಾಡಲಾಗಿತ್ತಾದರೂ ಪ್ರತಿದಿನ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಸಿಟಿ ಸಿವಿಲ್ ಕೋರ್ಟ್, ಹೈಕೋರ್ಟ್‍ಗೆ ಆಗಮಿಸುವ ನೌಕರರು, ಸಾರ್ವಜನಿಕರು ರೇಸ್‍ಕೋರ್ಸ್, ಆನಂದರಾವ್ ವೃತ್ತ, ಶೇಷಾದ್ರಿಪುರಂ ರಸ್ತೆ ಮೂಲಕವೇ ಬರಬೇಕು. ಆ ರಸ್ತೆಗಳೇ ಗಂಟೆಗಟ್ಟಲೆ ಜಾಮ್ ಆಗಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವುದಂತೂ ತಪ್ಪಲಿಲ್ಲ.

ಸಂಚಾರವನ್ನು ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ಹರಸಾಹಸಪಟ್ಟರು. ಡಿ.5ರಂದು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ಸಂದರ್ಭದಲ್ಲಿ ಟ್ರಾಫಿಕ್ ಬಿಸಿ ಅಷ್ಟಾಗಿ ತಟ್ಟಲಿಲ್ಲ. ಡಿ.8ರಂದು ಭಾರತ್ ಬಂದ್ ಸಂದರ್ಭದಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ಟ್ರಾಫಿಕ್ ಬಿಸಿ ಸಾರ್ವಜನಿಕರಿಗೆ ತಟ್ಟಿತ್ತು. ನಿನ್ನೆ ಮತ್ತು ಇಂದು ಕೂಡ ಹಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.

Facebook Comments