ವಾಹನ ಸವಾರರಿಗೆ ಬಿಗ್ ಶಾಕ್..! ಇಂಡಿಕೇಟರ್-ಮಿರರ್ ಕಡ್ಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.10- ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೈಡ್ ಮಿರರ್ ಅಳವಡಿಸದೆ ಹಾಗೂ ಇಂಡಿಕೇಟರ್ ದೀಪಗಳನ್ನು ಉಪಯೋಗಿಸದೆ ರಸ್ತೆಗಳನ್ನು ಕ್ರಾಸ್ ಮಾಡುವ ವಾಹನ ಸವಾರರ ವಿರುದ್ಧ ಮುಂದಿನ ದಿನಗಳಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಸಂಚಾರ ಸಂಪರ್ಕ ದಿನದ ಅಂಗವಾಗಿ ಇಂದು ಜಯನಗರದ 8ನೇ ಬ್ಲಾಕ್‍ನಲ್ಲಿರುವ ಜೆಎಸ್‍ಎಸ್ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ಸಂಚಾರ ಸಮಸ್ಯೆಗಳ ಅಹವಾಲು ಸ್ವೀಕಾರ ಮತ್ತು ಪರಿಹಾರ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾರ್ವಜನಿಕರ ಪ್ರಾಣ ಹಾನಿಯನ್ನು ತಡೆಗಟ್ಟುವ ಉದ್ದೇಶದಿಂದ ವಾಹನ ಸವಾರರು ರಸ್ತೆ ಕ್ರಾಸ್ ಮಾಡುವಾಗ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿರುವ ಅವರು, ನಗರದ ರಸ್ತೆಗಳನ್ನು ಸುರಕ್ಷತಾ ವಲಯಗಳನ್ನಾಗಿ ಪರಿವರ್ತಿಸುವಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಸಂಚಾರ ನಿಯಮ ಪಾಲನೆ ಹಾಗೂ ರಸ್ತೆ ಅಪಘಾತಗಳನ್ನು ತಡೆಗಟ್ಟುವುದು ಕೇವಲ ಸಂಚಾರ ಪೊಲೀಸರ ಕರ್ತವ್ಯವಲ್ಲದೆ ಪ್ರತಿಯೊಬ್ಬ ನಾಗರಿಕರ ಆದ್ಯಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸೈಡ್ ಮಿರರ್‍ಗಳನ್ನು ಅಳವಡಿಸಿಕೊಂಡು ಸೂಕ್ತ ಸಂದರ್ಭಗಳಲ್ಲಿ ಇಂಡಿಕೇಟರ್ ದೀಪ ಬಳಸಿ ವಾಹನ ಚಲಾಯಿಸಬೇಕೆಂದು ಅವರು ತಿಳಿಸಿದ್ದಾರೆ.

ಹೆಲ್ಮೆಟ್ ಧರಿಸದೆ ವಾಹನಗಳನ್ನು ಚಲಾಯಿಸುತ್ತಿರುವ ದ್ವಿಚಕ್ರ ವಾಹನ ಸವಾರುಗಳ ವಿರುದ್ಧ ಈಗಾಗಲೇ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೈಡ್ ಮಿರರ್ ಅಳವಡಿಸದೆ ಹಾಗೂ ಇಂಡಿಕೇಟರ್ ದೀಪಗಳನ್ನು ಅಳವಡಿಸದೆ ವಾಹನ ಚಲಾಯಿಸುವವರ ವಿರುದ್ಧವೂ ಕ್ರಮ ಕೈಗೊಳ್ಳುವುದು ಅತಿ ಅವಶ್ಯಕವಾಗಿದೆ ಎಂದು ಅವರು ತಿಳಿಸಿದ್ದಾರೆ. ಇಂಡಿಕೇಟರ್ ದೀಪಗಳನ್ನು ಬಳಸುವುದರಿಂದ ಹಿಂದೆ ಬರುತ್ತಿರುವ ಪ್ರಯಾಣಿಕರಿಗೆ ಸೂಚನಾ ದೀಪಗಳಾಗಿ ಅನುಕೂಲವಾಗುವುದಲ್ಲದೆ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Facebook Comments