ಬಂಗಾರಪೇಟೆಗೆ ಕೊರೊನಾ ‘ಕಟಿಂಗ್’ ಆತಂಕ..!
ಬಂಗಾರಪೇಟೆ, ಜೂ.2- ಚೆನ್ನೈ ಆತಂಕದ ಬೆನ್ನಲ್ಲೇ ಸಲೂನ್ ಶಾಪ್ನಿಂದ ಕೊರೊನಾ ಸೋಂಕು ಹರಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಕೋಲಾರದ ಜನರಲ್ಲಿ ಢವ ಢವ ಆರಂಭವಾಗಿದೆ. ಮಲೇಷಿಯಾದಿಂದ ಬಂದ ವ್ಯಕ್ತಿಯೊಬ್ಬನ ಕ್ವಾರಂಟೈನ್ ಉಲ್ಲಂಘನೆ ಹಾಗೂ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕೋಲಾರದಲ್ಲಿ ಆತಂಕ ಎದುರಾಗಿದೆ.
ಮೇ 22ರಂದು ಮಲೇಷಿಯಾದಿಂದ ಬಂದಿದ್ದ ಬಂಗಾರಪೇಟೆ ಮೂಲದ ಟೆಕ್ಕಿಯನ್ನು ಬೆಂಗಳೂರಿನ ಹೊಟೇಲ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. 27ರಂದು ಆ ವ್ಯಕ್ತಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ನಂತರ ವರದಿ ಬರುವ ಮುನ್ನವೇ ಆತನನ್ನು ಹೋಮ್ ಕ್ವಾರಂಟೈನ್ಗೆ ಕಳುಹಿಸಲಾಗಿತ್ತು.
ಬೆಂಗಳೂರಿನ ಆರೋಗ್ಯ ಇಲಾಖೆ ಮಾಡಿದ ಈ ಎಡವಟ್ಟಿನಿಂದ ಈಗ ಬಂಗಾರಪೇಟೆ ಪಟ್ಟಣದಲ್ಲಿ ಬಹುದೊಡ್ಡ ಆತಂಕ ಎದುರಾಗಿದೆ. ಮೇ 29ರಂದು ಬಂಗಾರಪೇಟೆಗೆ ಬಂದಿದ್ದ ವ್ಯಕ್ತಿ ತನ್ನ ವಯಸ್ಸಾದ ತಂದೆ-ತಾಯಿಯ ಜೊತೆಗೆದ್ದ. ಅಷ್ಟೇ ಅಲ್ಲದೆ, 31ರಂದು ಬೆಳಗ್ಗೆ ಮನೆ ಸಮೀಪದ ಸಲೂನ್ನಲ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದ. ಮದ್ಯಾಹ್ನದ ಹೊತ್ತಿಗೆ ಈ ಟೆಕ್ಕಿಯ ವರದಿಯಲ್ಲಿ ಕೊರೊನಾ ಪಾಸಿಟೀವ್ ಬಂದಿರುವುದು ಸ್ಥಳೀಯರ ನಿದ್ದೆಗೆಡಿಸಿದೆ.
ಇನ್ನು ಮೇ 31ರಂದು ತಾಲ್ಲೂಕು ಆರೋಗ್ಯಾಧಿಕಾರಿ ವಿಜಯಕುಮಾರಿ ಅವರಿಗೆ ಬೆಂಗಳೂರಿನಿಂದ ದೂರವಾಣಿ ಕರೆ ಮಾಡಿದ ಆರೋಗ್ಯಾಧಿಕಾರಿಗಳು ಇತ್ತೀಚೆಗೆ ಮಲೇಷಿಯಾದಿಂದ ವಾಪಸಾಗಿರುವ ವಿವೇಕಾನಂದನಗರ ನಿವಾಸಿಗೆ ಕೊರೊನಾ ಪಾಸಿಟಿವ್ ಆಗಿರುವುದನ್ನು ದೃಢಪಡಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯ ಆರೋಗ್ಯಾಧಿಕಾರಿಗಳು ಆತನನ್ನು ಪತ್ತೆ ಹಚ್ಚಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಕುಟುಂಬದ ಮೂವರನ್ನು ಕ್ವಾರಂಟೈನ್ ಮಾಡಿದ್ದಾರೆ.
ಇದಾದ ನಂತರ ಆತನ ಟ್ರಾವೆಲ್ ಹಿಸ್ಟರಿ ಪರೀಕ್ಷೆ ಮಾಡಿದಾಗಲೇ ಒಂದು ಕ್ಷಣ ಅವರಿಗೆ ಶಾಕ್ ಆಗಿತ್ತು. ಕಾರಣ, ಆತ ಭಾನುವಾರ ಬೆಳಗ್ಗೆ ಅಲ್ಲೇ ಮನೆ ಬಳಿ ಇದ್ದ ಸಲೂನ್ ಶಾಪ್ನಲ್ಲಿ ಕಟಿಂಗ್ ಮಾಡಿಸಿಕೊಂಡಿರುವುದು ತಿಳಿದುಬಂದಿದೆ. ತಕ್ಷಣ ಸಲೂನ್ ಮಾಲೀಕನನ್ನು ಕ್ವಾರಂಟೈನ್ ಮಾಡಿ, ಸೋಂಕಿತ ಟೆಕ್ಕಿ ಬಂದು ಹೋದ ನಂತರ ಯಾರ್ಯಾರು ಕಟಿಂಗ್ ಮಾಡಿಸಿಕೊಂಡಿದ್ದಾರೆ ಎಂಬುದನ್ನುಪತ್ತೆಹಚ್ಚಲು ಮುಂದಾಗಿದ್ದಾರೆ.
ಅಲ್ಲಿ ಹತ್ತಕ್ಕೂ ಹೆಚ್ಚು ಜನ ಬಂದು ಹೋಗಿರುವ ಮಾಹಿತಿ ಪಡೆದ ಅಧಿಕಾರಿಗಳು ಬೇರೆ ದಾರಿ ಕಾಣದೆ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಮೈಕ್ ಹಿಡಿದು ಅನೌ ಮಾಡಲು ಆರಂಭ ಮಾಡಿದ ನಂತರ ಸುಮಾರು 14 ಜನರ ಮಾಹಿತಿ ಸಿಕ್ಕಿದೆ. ಎಲ್ಲರನ್ನೂ ಎಳೆಸಂದ್ರದ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ವಿವೇಕಾನಂದ ನಗರವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಿ ಪ್ರಮುಖ ರಸ್ತೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಜತೆಗೆ ಇಡೀ ಏರಿಯಾಗೆ ಸೋಂಕು ನಿವಾರಕ ಸಿಂಪಡಿಸಲಾಗಿದ್ದು, ಮತ್ಯಾರಾದರೂ ಸೋಂಕಿತನ ಸಂಪರ್ಕ ಅಥವಾ ಈ ಸಲೂನ್ಗೆ ಬಂದು ಹೋಗಿದ್ದಾರಾ ಅನ್ನೋ ಹುಡುಕಾಟ ಮುಂದುವರಿದಿದೆ. ಹೊರರಾಜ್ಯದವರಿಂದ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಕೋಲಾರಕ್ಕೆ ಕಂಟಕ ಎದುರಾಗಿದ್ದು, ಇದೀಗ ವಿದೇಶಿ ವ್ಯಕ್ತಿಯೂ ಕಂಟಕಪ್ರಾಯನಾಗಿದ್ದಾನೆ.
– ವಿ.ಶಿವಾರೆಡ್ಡಿ