ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್‍ಗೆ ರೋಚಕ ಜಯ, ಟಾಪ್ 1 ಸ್ಥಾನಕ್ಕೇರಿದ ಕಿವೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಜೂ.6- ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ್ದ ಬಾಂಗ್ಲಾದ ಹುಡುಗರು ಅನುಭವಿ ಆಟಗಾರ ರಾಸ್ ಟೇಲರ್‍ರ ರೋಚಕ ಅರ್ಧ ಶತಕ (82 ರನ್, 9 ಬೌಂಡರಿ) ನೆರವಿನಿಂದಾಗಿ ಕಿವೀಸ್‍ಗಳ ಎದುರು ಮಂಡಿಯೂರಿದರೆ, ಪಾಯಿಂಟ್ಸ್ ಪಟ್ಟಿಯಲ್ಲಿ ಕೇನ್ ಪಡೆ ಟಾಪ್ 1 ಸ್ಥಾನಕ್ಕೇರಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ವಿಶ್ವದ ನಂಬರ್ 1 ಅಲೌಂಡರ್ ಶಕೀಬ್ ಹಲ್ ಹಸನ್‍ರ ಆಕರ್ಷಕ ಅರ್ಧಶತಕ (64 ರನ್, 7 ಬೌಂಡರಿ) ಹಾಗೂ ಅಂತಿಮ ಓವರ್‍ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮೊಹಮ್ಮದ್ ಶೈಫುದ್ದೀನ್ (29 ರನ್, 3 ಬೌಂಡರಿ, 1 ಸಿಕ್ಸರ್) ಆಟದ ನೆರವಿನಿಂದ ಕೇನ್ ವಿಲಿಯಮ್ಸ್‍ರ ನ್ಯೂಜಿಲೆಂಡ್ ಪಡೆಗೆ 245ರನ್‍ಗಳ ಗೆಲುವಿನ ಗುರಿಯನ್ನು ನೀಡಿತು.

ಶಕೀಬ್ ಅಬ್ಬರ: ನ್ಯೂಜಿಲೆಂಡ್‍ನ ಆರಂಭಿಕ ಆಟಗಾರರಾದ ಮಾರ್ಟಿನ್ ಗುಪ್ಟಿಲ್ ಹಾಗೂ ಮುನ್ರೊ ಬಾಂಗ್ಲಾ ದೇಶದ ಬೌಲಿಂಗ್ ಪಡೆ ಎದುರು ರನ್‍ಗಳ ಸುರಿಮಳೆಯನ್ನು ಸುರಿಸಿ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದಂತೆ ಬ್ಯಾಟಿಂಗ್‍ನಲ್ಲಿ ಮಿಂಚಿದ್ದ ಶಕೀಬ್ ಅಲ್ ಹಸನ್ ಮಾಟ್ರಿನ್ ಗುಪ್ಟಿಲ್ (24 ರನ್, 3 ಬೌಂಡರಿ 1 ಸಿಕ್ಸರ್)ರ ಬ್ಯಾಟಿಂಗ್ ವೇಗಕ್ಕೆ ಬ್ರೇಕ್ ಹಾಕುವ ಮೂಲಕ ಬಾಂಗ್ಲಾ ಪಾಳೆಯದಲ್ಲಿ ನಗೆ ಮೂಡಿಸಿದರು.

ಗುಪ್ಟಿಲ್ ಔಟಾದ ನಂತರ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಮುನ್ರೊ 10ನೆ ಓವರ್‍ನಲ್ಲಿ ಶಕೀಬ್‍ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ವಿಲಿಯಮ್ಸ್- ಟೇಲರ್ ಜೊತೆಯಾಟ:ಆರಂಭಿಕ ಆಟಗಾರರಾದ ಗುಪ್ಟಿಲ್ ಹಾಗೂ ಮುನ್ರೊ ತಂಡದ ಮೊತ್ತ 55 ರನ್ ಗಳಾಗುವಷ್ಟರಲ್ಲಿ ಪೆವಿಲಿಯನ್‍ಗೆ ಸೇರಿದರೂ ನಾಯಕ ಕೇನ್ ವಿಲಿಯಮ್ಸ್ ಹಾಗೂ ರಾಸ್ ಟೇಲರ್ ತಾಳ್ಮೆಯ ಆಟ ಪ್ರದರ್ಶಿಸಿ ಇನ್ನಿಂಗ್ಸ್ ಕಟ್ಟಿದರು.

ನಿಧಾನಗತಿಯ ಆಟದಿಂದ 72 ಎಸೆತಗಳಲ್ಲಿ 40 ರನ್ ಗಳಿಸಿದ ವಿಲಿಯಮ್ಸ್ ಅರ್ಧಶತಕ ಹೊಸ್ತಿನಲ್ಲಿದ್ದಾಗ ಮೆಹದಿ ಹಸನ್‍ಗೆ ವಿಕೆಟ್ ಒಪ್ಪಿಸಿದರು. ಈ ಜೋಡಿ ಬೇರ್ಪಡುವ ಮುನ್ನ 3ನೆ ವಿಕೆಟ್‍ಗೆ 105 ರನ್‍ಗಳ ಜೊತೆಯಾಟ ನೀಡಿದ್ದರು. ನಾಯಕ ಕೇನ್ ವಿಲಿಯಮ್ಸ್ ಔಟಾದ ನಂತರ ಕ್ರೀಸ್‍ಗೆ ಇಳಿದ ಲಾಥಮ್ ರನ್ ಖಾತೆಯನ್ನೇ ತೆರೆಯದೆ ಹಸನ್‍ಗೆ ಬಲಿಯಾದರು.

ಒಂದೆಡೆ ವಿಕೆಟ್ ಉರುಳಿದರೂ ಕ್ರೀಸ್‍ನಲ್ಲಿ ನೆಲೆಯೂರಿದ್ದ ರಾಸ್ ಟೇಲರ್‍ರ ಆಕರ್ಷಕ ಅರ್ಧಶತಕ (82 ರನ್, 9 ಬೌಂಡರಿ), ಬಾಲಂ ಗೋಚಿಗಳಾದ ಗ್ರಾಂಡ್‍ಹೋಮೆ (25 ರನ್, 2 ಬೌಂಡರಿ, 1 ಸಿಕ್ಸರ್) ಹಾಗೂ ಸ್ಯಾನೆಟರ್(17 ರನ್,2 ಬೌಂಡರಿ)ರ ಆಟದಿಂದಾಗಿ ನ್ಯೂಜಿಲೆಂಡ್ 47.1 ಓವರ್‍ಗಳಲ್ಲಿ 248 ರನ್‍ಗಳನ್ನು ಬಾರಿಸುವ ಮೂಲಕ ಗೆಲುವಿನ ಕೇಕೆ ಹಾಕಿತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ