ಬ್ಯಾಂಕ್ ನೌಕರರ ಮುಷ್ಕರದಿಂದ ವಹಿವಾಟು ವ್ಯತ್ಯಯ, ಗ್ರಾಹಕರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.22-ವೇತನ ಹೆಚ್ಚಳ ಮತ್ತು ಬ್ಯಾಂಕ್‍ಗಳ ವಿಲೀನ ಖಂಡಿಸಿ ಇಂದು ದೇಶದ ವಿವಿಧೆಡೆ ನಡೆದ ಬ್ಯಾಂಕ್ ಬಂದ್‍ಗಳಿಂದಾಗಿ ಕೆಲವೆಡೆ ವಹಿವಾಟಿಗೆ ಅಡಚಣೆ ಉಂಟಾಗಿದೆ.
ನವದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈನಂತಹ ಮೆಟ್ರೋ ನಗರಗಳಲ್ಲಿ ಹಲವೆಡೆ ಬ್ಯಾಂಕ್‍ಗಳು ತೆರೆದಿದ್ದರೂ ಎರಡನೇ ಹಂತದ ನಗರಗಳಲ್ಲಿ ಅಲ್ಪಮಟ್ಟಿಗೆ ವ್ಯತ್ಯಯ ಉಂಟಾಗಿದೆ.

ನಗದು ಪಡೆಯುವುದು, ಜಮಾವಣೆ ಮತ್ತು ಚೆಕ್‍ಗಳ ವಹಿವಾಟಿನಲ್ಲಿ ವ್ಯತ್ಯಯ ಆಗಿದೆ ಎಂದು ಮೂಲಗಳು ತಿಳಿಸಿವೆ. ನಗರ ಪ್ರದೇಶಗಳ ಕೆಲವು ಬ್ಯಾಂಕ್‍ಗಳು ತೆರೆದಿದ್ದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಉದ್ಯೋಗಿಗಳು ಕೂಡ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ.

ದೇಶದ ಪ್ರಮುಖ ಬ್ಯಾಂಕ್‍ಗಳಲ್ಲೊಂದಾದ ಎಸ್‍ಬಿಐ ಈಗಾಗಲೇ ಗ್ರಾಹಕರಿಗೆ ಬಂದ್ ಬಗ್ಗೆ ಮಾಹಿತಿ ನೀಡಿದ್ದು, ಸಿಬ್ಬಂದಿಗಳು ಸಾರ್ವಜನಿಕರಿಗೆ ಅಡಚಣೆ ಉಂಟು ಮಾಡಬಾರದು ಎಂದು ಇಂದು ಕೂಡ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಕೆಲವೆಡೆ ಪ್ರತಿಭಟನೆಗಳು ಮುಂದುವರೆದಿರುವುದರಿಂದ ಷೇರುಪೇಟೆಯಲ್ಲೂ ಎಸ್‍ಬಿಐನ ಷೇರು ಕುಸಿದಿದೆ.

ಬ್ಯಾಂಕ್‍ಗಳ ವಿಲೀನ ದೇಶದ ಆರ್ಥಿಕತೆಗೆ ಎಚ್ಚರಿಕೆ ಘಂಟೆಆಗಿದ್ದು, ಕೂಡಲೇ ಕೇಂದ್ರ ಸರ್ಕಾರ ಇದನ್ನು ನಿಲ್ಲಿಸಬೇಕೆಂದು ಬಂದ್‍ಗೆ ಕರೆ ನೀಡಿದ್ದ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್‍ನ ಪ್ರಧಾನಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಒತ್ತಾಯಿಸಿದ್ದಾರೆ.

ಈ ಕೆಟ್ಟ ನಿರ್ಧಾರಗಳಿಂದ ಹಲವು ಬ್ಯಾಂಕ್‍ನ ಶಾಖೆಗಳನ್ನು ಮುಚ್ಚಿವೆ. ಇನ್ನು ಸಾಲ ಮರುಪಾವತಿಯೂ ಕೂಡ ಕುಂಠಿತಗೊಂಡಿದ್ದು, ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಆರೋಪಿಸಿದರು.

Facebook Comments